ನವದೆಹಲಿ: ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಪ್ರತಿದಿನ 50 ಸಾವಿರಕ್ಕೂ ಅಧಿಕ ಹೊಸ ಕರೊನಾ ಪ್ರಕರಣಗಳು ವರದಿಯಾಗುತ್ತಿವೆ. ಈ ಮೂಲಕ ಭಾರತ ಹೊಸದೊಂದು ಕುಖ್ಯಾತಿಗೆ ಪಾತ್ರವಾಗಿದೆ.
ಹೌದು...! ಜಗತ್ತಿನಲ್ಲಿ ಅತಿ ಹೆಚ್ಚು ವೇಗದಲ್ಲಿ ಕರೊನಾ ವ್ಯಾಪಿಸುತ್ತಿರುವ ರಾಷ್ಟ್ರವೆಂದರೆ ಭಾರತ. ಕಳೆದ ಒಂದು ವಾರದಲ್ಲಿ ಭಾರತದಲ್ಲಿ ಶೇ.20 ಪ್ರಮಾಣದಲ್ಲಿ ಕರೊನಾ ಕೇಸ್ಗಳು ಹೆಚ್ಚಾಗುತ್ತಿವೆ ಎಂದು ಬ್ಲೂಮ್ಬರ್ಗ ಕರೊನಾ ಟ್ರ್ಯಾಕರ್ ಅಂಕಿ-ಅಂಶ ನೀಡಿದೆ.
ಇದನ್ನೂ ಓದಿ: ಕೋವಿಡ್ ಕಾಲದಲ್ಲಿ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಹೊಸದೊಂದು ಕಾಯಿಲೆ? ಪಾಲಕರ ಚಿಂತೆಗೀಡು ಮಾಡಿದೆ ಕರೊನಾ
130 ಕೋಟಿ ಜನರಿರುವ ಭಾರತದಲ್ಲಿ ಸದ್ಯ 14.83 ಲಕ್ಷ ಸೋಂಕಿತರಿದ್ದಾರೆ. 33,425 ಜನರು ಕರೊನಾದಿಂದಾಗಿ ಮೃತಪಟ್ಟಿದ್ದಾರೆ. ಸದ್ಯ ಭಾರತಕ್ಕಿಂತ ಮುಂದಿರುವ ದೇಶಗಳೆಂದರೆ ಅಮೆರಿಕ ಹಾಗೂ ಬ್ರೆಜಿಲ್ ಮಾತ್ರ. ಆದರೆ, ಕರೊನಾ ಸೋಂಕು ಹೆಚ್ಚಾಗುತ್ತಿರುವ ವೇಗದಲ್ಲಿ ಇವೆರಡೂ ದೇಶವನ್ನು ಮೀರಿಸಿದೆ.
ಅಮೆರಿಕದಲ್ಲಿ 42.90 ಲಕ್ಷ ಸೋಂಕಿತರಿದ್ದರೆ, ಬ್ರೆಜಿಲ್ನಲ್ಲಿ ಇವರ ಪ್ರಮಾಣ 24.42 ಲಕ್ಷ. ಇದೇ ರೀತಿ ಮುಂದುವರಿದರೆ ಇನ್ನೊಂದು ತಿಂಗಳಲ್ಲಿ ಬ್ರೆಜಿಲ್ ದೇಶವನ್ನು ಮೀರಿಸಿದರೆ ಅಚ್ಚರಿಯೇನಿಲ್ಲ.
ಇನ್ನು, ದೇಶದಲ್ಲಿ ಅತಿ ಹೆಚ್ಚು ಕರೊನಾ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಜತೆಗೆ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದಶದಲ್ಲಿ ನಿತ್ಯ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ.
ಇನ್ನೊಂದು ದುರ್ದೈವವೆಂದರೆ, ಅತಿ ಹೆಚ್ಚು ಜನರಿರುವ ದೇಶದಲ್ಲಿ ಅತಿ ಕಡಿಮೆ ಪರೀಕ್ಷೆಗಳು ನಡೆಯುತ್ತಿವೆ. ಭಾರತದಲ್ಲಿ ಪ್ರತಿ ಸಾವಿರ ಜನರಿಗೆ 11.8 ಜನರಿಗೆ ಪರೀಕ್ಷೆ ಮಾಡಿದರೆ, ಬ್ರೆಜಿಲ್ನಲ್ಲಿ ಈ ಪ್ರಮಾಣ 11.93 ಆಗಿದೆ. ಆದರೆ ಅಮೆರಿಕದಲ್ಲಿ ಪ್ರತಿ ಒಂದು ಸಾವಿರ ಜನರಿಗೆ 152.98, ರಷ್ಯಾದಲ್ಲಿ 184.34 ಜನರಿಗೆ ತಪಾಸಣೆ ಮಾಡಲಾಗಿದೆ ಎಂದು ಆಕ್ಸ್ಫರ್ಡ್ ವಿವಿ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.