ನ್ಯೂಸ್

ಟ್ರಂಪ್ ಬೆದರಿಕೆಗೆ ಮಣಿಯದ ಭಾರತ

ನವದೆಹಲಿ: ಭಾರತ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಾಕೀತು ಮಾಡಿದ್ದ ಬೆನ್ನಿಗೇ ಭಾರತದ ತೈಲ ಸಂಸ್ಕರಣಾಗಾರರು ರಷ್ಯಾದ ತೈಲ ಉತ್ಪಾದಕರಿಂದ ತೈಲ ಖರೀದಿಸುವುದನ್ನು ಮುಂದುವರಿಸಿದ್ದಾರೆ ಎನ್ನುವ ಸಂಗತಿ ಮುನ್ನೆಲೆಗೆ ಬಂದಿದೆ. ಭಾರತೀಯ ತೈಲ ಸಂಸ್ಕರಣಾಗಾರರು ರಷ್ಯಾದ ಪೂರೈಕೆದಾರರಿಂದ ತೈಲ ಪಡೆಯುವುದನ್ನು ಮುಂದುವರಿಸಿದ್ದು, ಪೂರೈಕೆ ನಿರ್ಣಯಗಳು ಬೆಲೆ, ಕಚ್ಚಾತೈಲದ ಗುಣಮಟ್ಟ, ದಾಸ್ತಾನು, ಸಾಗಾಟ ಮತ್ತು ಇತರ ಆರ್ಥಿಕ ಅಂಶಗಳನ್ನು ಅವಲಂಬಿಸಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾದಿಂದ ತೈಲ ಖರೀದಿಸದಂತೆ ಅಥವಾ ಹೊಸ ಪೂರೈಕೆದಾರರನ್ನು ಹುಡುಕುವಂತೆ ಭಾರತ ತನ್ನ ಸಂಸ್ಕರಣಾಗಾರಗಳಿಗೆ ಯಾವುದೇ ಆದೇಶ ನೀಡಿಲ್ಲ ಎಂಬುದಾಗಿ ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. ‘ಭಾರತ ರಷ್ಯಾದ ತೈಲ ಖರೀದಿಸುವುನ್ನು ನಿಲ್ಲಿಸಿದೆ ಎಂದು ಕೇಳಿದ್ದೇನೆ, ಅದು ಸರಿಯೋ ತಪ್ಪೋ ಗೊತ್ತಿಲ್ಲ, ಆ ಸುದ್ದಿ ಖಚಿತವಾಗಿದ್ದರೆ ಅದು ಉತ್ತಮ ಹೆಜ್ಜೆ’ ಎಂದು ಟ್ರಂಪ್ ಶನಿವಾರ ವಾಷಿಂಗ್ಟನ್​ನಲ್ಲಿ ಸುದ್ದಿಗಾರರಿಗೆ ಹೇಳಿದ್ದರು. ಅದಾಗ್ಯೂ ಭಾರತ ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸಿರುವುದು ಗಮನ ಸೆಳೆದಿದೆ.

ಟ್ರಂಪ್ ಹೇಳಿಕೆಗೆ ಎಐ ತದ್ವಿರುದ್ಧ ಉತ್ತರ!

ಭಾರತದ್ದು ಮೃತ ಆರ್ಥಿಕತೆ ಎಂದು ಟ್ರಂಪ್ ಹೇಳಿದ್ದ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ‘ಎಐ’ (ಕೃತಕ ಬುದ್ಧಿಮತ್ತೆ) ಬಳಿ ಆ ಬಗ್ಗೆ ಕೇಳಿದ್ದಕ್ಕೆ ಅವು ಅದಕ್ಕೆ ವ್ಯತಿರಿಕ್ತ ಉತ್ತರ ನೀಡಿವೆ.

ಚಾಟ್​ಜಿಪಿಟಿ: ಭಾರತದ ಆರ್ಥಿಕತೆ ಸಾವಿನಿಂದ ತುಂಬಾ ದೂರವಿದೆ, ಅದು ಕ್ರಿಯಾತ್ಮಕವಾಗಿದೆ, ಮಹತ್ವಾಕಾಂಕ್ಷೆಯದ್ದಾಗಿದೆ.

ಗ್ರಾಕ್: ಇಲ್ಲ, ಭಾರತದ ಆರ್ಥಿಕತೆ ಸತ್ತಿಲ್ಲ. ಜಾಗತಿಕವಾಗಿ ಕ್ಷಿಪ್ರ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಅದು ಉಳಿಯಲಿದೆ.

ಜೆಮಿನಿ: ಭಾರತದ ಆರ್ಥಿಕತೆ ಬಲವಾದ ಬೆಳವಣಿಗೆಯಿಂದ ನಿರೂಪಿಸಲ್ಪಟ್ಟಿದೆ.

ಮೆಟಾ ಎಐ: ಭಾರತದ ಆರ್ಥಿಕತೆ ಸತ್ತಿಲ್ಲ. ಜಾಗತಿಕವಾಗಿ ಕ್ಷಿಪ್ರ ಪ್ರಗತಿಯಲ್ಲಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ.

ಕೊಪೈಲಟ್: ನಿಜವಾಗಿಯೂ ಅದಕ್ಕೆ ತದ್ವಿರುದ್ಧವಾಗಿದೆ.