ನ್ಯೂಸ್

ಸೆಪ್ಟೆಂಬರ್ ಮೊದಲು ಕರೊನಾ ಲಾಕ್​ಡೌನ್ ಹಿಂಪಡೆಯುವ ಸಾಧ್ಯತೆ ಇಲ್ಲ ಅಂತಿದೆ ಅಧ್ಯಯನ ವರದಿ!

ನವದೆಹಲಿ: ಸದ್ಯ ಜಗತ್ತನ್ನು ಕಾಡುತ್ತಿರುವ ಕರೊನಾ ವೈರಸ್ ಸೋಂಕು ಹರಡುತ್ತಿರುವ ರೀತಿ ಗಮನಿಸಿದರೆ ಕರೊನಾ ಲಾಕ್​ಡೌನ್ ಅನ್ನು ಸೆಪ್ಟೆಂಬರ್ ತನಕ ಹಿಂಪಡೆಯುವ ಸಾಧ್ಯತೆಗಳು ಇಲ್ಲ ಎಂದು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್​(ಬಿಸಿಜಿ)ನ ಅಧ್ಯಯನ ವರದಿಯೊಂದು ಹೇಳಿದೆ.

ಚೀನಾದಲ್ಲಿ ಲಾಕ್​ಡೌನ್ ಘೋಷಣೆಯಾಗುತ್ತಿರುವಂತೆ ಭಾರತದಲ್ಲೂ ಲಾಕ್​ಡೌನ್ ಘೋಷಣೆಯಾಗಿದೆ ಎಂಬುದನ್ನು ಉಲ್ಲೇಖಿಸಿರುವ ವರದಿ, COVID19 ವೈರಸ್ ಹರಡುತ್ತಿರುವ ಸನ್ನಿವೇಶದ ಇಲ್ಲಸ್ಟ್ರೇಷನ್ ಮುಂದಿಟ್ಟುಕೊಂಡು ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ವಿವರಿಸಿದೆ. ಅಲ್ಲದೆ, ಪ್ರಮುಖ ದೇಶಗಳ ಲಾಕ್​ಡೌನ್ ಸನ್ನಿವೇಶ ಮತ್ತು ಹಿಂಪಡೆಯಬಹುದಾದ ಸಂಭಾವ್ಯ ಸಮಯವನ್ನು ಉಲ್ಲೇಖಿಸಿದೆ. ಈ ವರದಿ ಪ್ರಕಾರ, ಭಾರತದಲ್ಲಿ ಕರೋನಾ ಲಾಕ್​ಡೌನ್​ ಅನ್ನು ಸರ್ಕಾರ ಜೂನ್​ ಕೊನೆಯವಾರ ಮತ್ತು ಸೆಪ್ಟೆಂಬರ್​ ಎರಡನೇ ವಾರದ ನಡುವೆಯಷ್ಟೇ ಹಿಂಪಡೆಯಬಹುದು.

ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯ ತಯಾರಿ ಮತ್ತು ಸಾರ್ವಜನಿಕ ನೀತಿಯ ಪರಿಣಾಮಕಾರಿ ಅನುಷ್ಠಾನಗಳನ್ನು ಆಧರಿಸಿ ನಿರೀಕ್ಷಿತ ಸವಾಲುಗಳನ್ನು ಹೇಗೆ ಸ್ವೀಕರಿಸಬಹುದು ಎಂಬುದನ್ನು ಅಂದಾಜಿಸಿಯೇ ಈ "ದೀರ್ಘ ಅವಧಿ"ಯ ನಿರ್ಬಂಧಗಳನ್ನು ಹಿಂಪಡೆಯಬಹುದಷ್ಟೆ. ನಾವು ಈ ವರದಿಯನ್ನು ಆಯಾ ದೇಶಗಳ ಆಂತರಿಕ ಮತ್ತು ಬಾಹ್ಯ ಡೇಟಾ ಸಂಗ್ರಹಿಸಿ ಸಿದ್ಧಪಡಿಸಿದ್ದೇವೆ. ಲಾಕ್​ಡೌನ್ ಅವಧಿ, ವೈರಲ್ ಸೋಂಕಿನ ಉಚ್ಛ್ರಾಯ ಸ್ಥಿತಿ, ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ಇತರೆ ಆರೋಗ್ಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಊಹಿಸುವ ಸಲುವಾಗಿ ಈ ಪ್ರೆಡಿಕ್ಷನ್ಸ್ ಅನ್ನು ಪ್ರಕಟಿಸಿಲ್ಲ. ಅಲ್ಲದೆ ಇದು ಬಿಸಿಜಿ ಅಧಿಕೃತ ದೃಷ್ಟಿಕೋನವೂ ಇದರಲ್ಲಿ ಅಡಗಿಲ್ಲ. ವಾಸ್ತವಾಂಶಗಳನ್ನು ಮುಂದಿಟ್ಟು ಅಧ್ಯಯನ ನಡೆಸಿ ವರದಿ ಪ್ರಕಟಿಸಲಾಗಿದೆ ಎಂದು ಬಿಸಿಜಿ ಹೇಳಿಕೊಂಡಿದೆ.

ಇದರಲ್ಲಿ ಮಾರ್ಚ್​ 25ರತನಕದ ಡೇಟಾ ಇದ್ದು, ಅಧ್ಯಯನಕ್ಕೆ ಪರಿಗಣಿಸಿರುವ ಅಂಶಗಳಿವು - ಸಂಪೂರ್ಣ ಲಾಕ್​ಡೌನ್ ಯಾವ ರಾಷ್ಟ್ರದಲ್ಲಿ ಏನಿದೆ ಸ್ಥಿತಿ?, ಲಾಕ್​ಡೌನ್ ಶುರುವಾಗಬಹುದಾದ ಸಂಭಾವ್ಯ ದಿನಾಂಕ, ಆಯಾ ರಾಷ್ಟ್ರಗಳಲ್ಲಿ ಸೋಂಕು ಉಚ್ಛ್ರಾಯ ಸ್ಥಿತಿ ತಲುಪಲಿರುವ ಸಮಯ, ಅಲ್ಪಾವಧಿ ಮತ್ತು ದೀರ್ಘಾವಧಿಯ ಸಂಭಾವ್ಯ ಲಾಕ್​ಡೌನ್ ಅಂತ್ಯಗೊಳ್ಳುವ ದಿನಾಂಕಗಳನ್ನು ಪರಿಗಣಿಸಲಾಗಿದೆ. ಆದರೆ, ಇದನ್ನು ಯಾವ ಸರ್ಕಾರಗಳೂ ಅಧಿಕೃತವಾಗಿ ದೃಢೀಕರಿಸಿಲ್ಲ. (ಏಜೆನ್ಸೀಸ್)