ನವದೆಹಲಿ: ಪೂರ್ವಾನ್ವಯ ತೆರಿಗೆ ಹೇರಿಕೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ವ್ಯಾಜ್ಯವೊಂದರಲ್ಲಿ ಭಾರತಕ್ಕೆ ಸೋಲಾಗಿದ್ದು, ಬ್ರಿಟನ್ನ ಕೈರ್ನ್ ಎನರ್ಜಿ ಕಂಪನಿಗೆ 10,500 ಕೋಟಿ ರೂಪಾಯಿ (1.40 ಬಿಲಿಯನ್ ಡಾಲರ್) ಮೊತ್ತವ ಮರಳಿಸುವಂತೆ ಆದೇಶಿಸಲಾಗಿದೆ. ಕೈರ್ನ್ ಎನರ್ಜಿ ಕಂಪನಿ ಹೂಡಿದ್ದ ದಾವೆಯ ವಿಚಾರಣೆ ನಡೆಸಿದ ಮೂವರು ಸದಸ್ಯರ ತೆರಿಗೆ ನ್ಯಾಯಮಂಡಳಿ ಈ ಸೂಚನೆ ನೀಡಿದೆ.
ತೆರಿಗೆ ವಸೂಲಿಗಾಗಿ ಸರ್ಕಾರ ಕೈರ್ನ್ ಎನರ್ಜಿಯ ಡಿವಿಡೆಂಡ್ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಹಾಗೂ ತೆರಿಗೆ ಮರುಪಾವತಿಯನ್ನು ತಡೆ ಹಿಡಿದಿತ್ತು. ಅವೆಲ್ಲವನ್ನೂ ಬಡ್ಡಿ ಹಾಗೂ ವೆಚ್ಚ ಸಹಿತ ಮರಳಿಸುವಂತೆ 582 ಪುಟಗಳ ತೀರ್ಪಿನಲ್ಲಿ ಸೂಚಿಸಿದೆ. ಅದರ ಮೊತ್ತ 10,500 ಕೋಟಿ ರೂಪಾಯಿ ಆಗುತ್ತದೆ.
ಕೈರ್ನ್ ಇಂಡಿಯಾದ 2006-07ನೇ ಸಾಲಿನ ಆಂತರಿಕ ಪುನರ್ಸಂಘಟನೆ ಹಿನ್ನೆಲೆಯಲ್ಲಿ 10,247 ಕೋಟಿ ರೂಪಾಯಿ ಪೂವಾನ್ವಯ ತೆರಿಗೆಯನ್ನು ಭಾರತ ಸರ್ಕಾರ ವಿಧಿಸಿದ್ದು ನ್ಯಾಯೋಚಿತವಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಈ ಮಂಡಳಿಯಲ್ಲಿ ಭಾರತದ ಒಬ್ಬ ಪ್ರತಿನಿಧಿಯೂ ಇದ್ದರು.
2ನೇ ಸೋಲು: ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಭಾರತಕ್ಕೆ ಆಗಿರುವ ಎರಡನೇ ಸೋಲು ಇದಾಗಿದೆ. ಸೆಪ್ಟೆಂಬರ್ನಲ್ಲಿ ಬ್ರಿಟನ್ನ ವೊಡಾಫೋನ್ ಸಮೂಹ 22,100 ಕೋಟಿ ರೂಪಾಯಿ ತೆರಿಗೆ ಪ್ರಕರಣದಲ್ಲಿ ಜಯ ಸಾಧಿಸಿತ್ತು.