ನ್ಯೂಸ್

ಹೂಡಿಕೆ ಒಪ್ಪಂದಕ್ಕೆ ಭಾರತ-ಇಸ್ರೇಲ್ ಸಹಿ

ನವದೆಹಲಿ: ಭಾರತ ಮತ್ತು ಇಸ್ರೇಲ್​ನಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಮತ್ತು ಹೂಡಿಕೆಯನ್ನು ರಕ್ಷಿಸುವ ಗುರಿಯೊಂದಿಗೆ ಎರಡೂ ದೇಶಗಳು ಸೋಮವಾರ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಸ್ರೇಲ್​ನ ರಾಜ್ಯ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರು ಸಹಿ ಮಾಡಿರುವ ಒಪ್ಪಂದ ಎರಡೂ ದೇಶಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಿ, ಹೂಡಿಕೆದಾರರಿಗೆ ಹೆಚ್ಚಿನ ಖಚಿತತೆ ಮತ್ತು ರಕ್ಷಣೆ ಒದಗಿಸಲಿದೆ.

ಈ ಒಪ್ಪಂದ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಹೂಡಿಕೆಯ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಸ್ತುತ ಉಭಯ ದೇಶಗಳ ನಡಚುವಿನ ಹೂಡಿಕೆ 800 ಮಿಲಿಯನ್ ಡಾಲರ್ (7000 ಕೋಟಿ ರೂ.) ಇದ್ದು, ಇದು ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ವ್ಯವಹಾರ ಮತ್ತು ಆರ್ಥಿಕತೆಗೆ ಪ್ರಯೋಜನವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇಸ್ರೇಲ್ ಏಪ್ರಿಲ್ 2000ದಿಂದ ಜೂನ್ 2025ರವರೆಗೆ ವಿದೇಶ ನೇರ ಹೂಡಿಕೆ ಅಡಿಯಲ್ಲಿ 337.77 ಮಿಲಿಯನ್ ಡಾಲರ್ (3300 ಕೋಟಿ ರೂ.) ಹೂಡಿಕೆ ಮಾಡಿದೆ.