ನ್ಯೂಸ್

ಭಾರತವು ನೀರನ್ನು ಅಸ್ತ್ರವಾಗಿ ಬಳಸುತ್ತಿದೆ: ಪಾಕ್ ಪ್ರತಿ ಹನಿ ನೀರಿಗೂ ಬಳಲುತ್ತಿದೆ, ನಮಗೆ ನ್ಯಾಯ ಕೊಡಿಸಿ ಎಂದು ಜಗತ್ತಿನ ಮುಂದೆ ಬೇಡಿದ ಪಾಕ್​ ಅಧ್ಯಕ್ಷ | Pakistan

ಇಸ್ಲಾಮಾಬಾದ್: ಭಾರತವು ಪಾಕಿಸ್ತಾನದ(Pakistan) ವಿರುದ್ಧ ನೀರನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಜಗತ್ತಿನ ಮುಂದೆ ಪಾಕ್​ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿರುವುದರಿಂದ ಪಾಕ್​ ಅಂತರರಾಷ್ಟ್ರೀಯ ವೇದಿಕೆಯ ಮೇಲೆ ತನ್ನ ಕೋಪವನ್ನು ಹೊರಹಾಕಿದೆ.

ಈ ಬಗ್ಗೆ ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾಜಿಕ ಅಭಿವೃದ್ಧಿ ಕುರಿತ ವಿಶ್ವ ಸಮ್ಮೇಳನದಲ್ಲಿ ಮಾತನಾಡಿರುವ ಆಸಿಫ್ ಅಲಿ ಜರ್ದಾರಿ, ಭಾರತ ಪಾಕಿಸ್ತಾನದ ವಿರುದ್ಧ ನೀರನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ.ಆದ್ದರಿಂದ ಅಂತರರಾಷ್ಟ್ರೀಯ ಸಮುದಾಯವು ನ್ಯಾಯ, ಶಾಂತಿ ಮತ್ತು ಯನ್ನು ಎತ್ತಿಹಿಡಿಯಬೇಕೆಂದು ಜರ್ದಾರಿ ಒತ್ತಾಯಿಸಿದ್ದಾರೆ.

ಭಾರತದ ಸಿಂಧೂ ಜಲ ಒಪ್ಪಂದದ ಅಮಾನತು 24 ಕೋಟಿ ಪಾಕಿಸ್ತಾನಿಗಳಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಈ ಕ್ರಮವು ಇಡೀ ಪಾಕ್​ ನೀರನ್ನು ಕಸಿದುಕೊಳ್ಳುವಂತೆ ಮಾಡುತ್ತದೆ. ಅದರೆ ಇದು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದ್ದಾರೆ. ಇಂತಹ ಒತ್ತಡ ತಂತ್ರಗಳು ಯಶಸ್ವಿಯಾಗಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಪಾಕ್​ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲದೆ, ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸುವ ಮೂಲಕ ಭಾರತ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆಸಿಫ್ ಅಲಿ ಆರೋಪ ಮಾಡಿದ್ದಾರೆ. ಇದು ಪ್ರಾದೇಶಿಕ ಸ್ಥಿರತೆಯ ಮೇಲಿನ ನೇರ ದಾಳಿ ಎಂದು ಕಿಡಿಕಾರಿದ್ದಾರೆ.

ಭಾರತ ಪಾಕಿಸ್ತಾನದ ವಿರುದ್ಧ ನೀರನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಒಪ್ಪಂದವನ್ನು ಸ್ಥಗಿತಗೊಳಿಸುವುದರಿಂದ ಲಕ್ಷಾಂತರ ಪಾಕಿಸ್ತಾನಿಗಳ ನೀರಿನ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆಸಿಫ್ ಅಲಿ ಜರ್ದಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಾಕ್​ ತನ್ನ ಸಾರ್ವಭೌಮತ್ವ ಮತ್ತು ಜನರ ಜೀವನೋಪಾಯಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ವಿರೋಧಿಸುತ್ತದೆ. ಪ್ಯಾಲೆಸ್ಟೈನ್ ಮತ್ತು ಕಾಶ್ಮೀರದ ಸಮಸ್ಯೆಗಳು ಒಂದೇ ನಾಣ್ಯದ ಎರಡು ಬದಿಗಳಾಗಿವೆ ಎಂದು ಜರ್ದಾರಿ ಹೇಳಿದರು.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರ ಕ್ರೂರ ಹತ್ಯೆಯ ನಂತರ, ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಇದರಲ್ಲಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು.

1960 ಸೆಪ್ಟೆಂಬರ್ 19 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಆರು ನದಿಗಳ ನೀರನ್ನು ವಿಭಜಿಸುವ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬಿಯಾಸ್, ರಾವಿ ಮತ್ತು ಸಟ್ಲೆಜ್ ನದಿಗಳನ್ನು ಭಾರತಕ್ಕೆ ಹಂಚಲಾಯಿತು. ಆದರೆ ಚೆನಾಬ್, ಝೀಲಂ ಮತ್ತು ಸಿಂಧೂ ನದಿಗಳನ್ನು ಪಾಕಿಸ್ತಾನಕ್ಕೆ ಹಂಚಲಾಯಿತು. (ಏಜೆನ್ಸೀಸ್)