ನವದೆಹಲಿ: ‘ಭಾರತ ಯಾವುದೇ ದೇಶ ಅಥವಾ ಸಮುದಾಯಕ್ಕೆ ಬೆದರಿಕೆ ಒಡ್ಡಿಲ್ಲ. ನಾವು ಜಗತ್ತಿನ ಒಳಿತನ್ನು ಬಯಸುತ್ತೇವೆ. ಸ್ವಾವಲಂಬಿ ಭಾರತದ ಬಗ್ಗೆ ನಾವು ಮಾತನಾಡುತ್ತೇವೆ. ಗುರಿಯತ್ತ ಇಡೀ ಜಗತ್ತನ್ನು ಕೊಂಡೊಯ್ಯುವ ಪ್ರಗತಿಯ ಕಡೆಗೆ ನಾವು ಗಮನಹರಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ಹೇಳಿದರು.
ಸಿಖ್ ಗುರು ತೇಗ್ ಬಹಾದುರ್ ಅವರ 400ನೇ ಜಯಂತಿ ಆಚರಣೆ ನಿಮಿತ್ತ ಕೆಂಪುಕೋಟೆಯಿಂದ ಮಾತನಾಡಿದ ಅವರು, ಭರತ ಭೂಮಿ ಕೇವಲ ಒಂದು ದೇಶವಲ್ಲ. ಇದು ನಮ್ಮ ಪರಂಪರೆ ಮತ್ತು ದೊಡ್ಡ ಸಂಪ್ರದಾಯವೂ ಹೌದು. ನಮ್ಮ ಸಂತರು, ಗುರುಗಳ ಚಿಂತನೆಯಿಂದ ರೂಪುಗೊಂಡ ಶಕ್ತಿ ಇದು. ಸಿಖ್ಖರ 10 ಧರ್ಮಗುರುಗಳ ಬಗ್ಗೆಯೂ ನನಗೆ ಗೌರವವಿದೆ. ದೇಶವೂ ಅವರನ್ನು ಗೌರವಿಸುತ್ತಿದೆ. ಶ್ರೀ ಗುರುಗ್ರಂಥ ಸಾಹಿಬ್ ನಮ್ಮ ಪಾಲಿಗೆ ಸ್ವಯಂ ಸಾಕ್ಷಾತ್ಕಾರದ ಮಾರ್ಗದರ್ಶಿಯಾಗಿದೆ. ಅದೇ ರೀತಿ, ಅದು ಭಾರತದ ವೈವಿಧ್ಯತೆ ಮತ್ತು ಐಕ್ಯತೆಯ ಜೀವಂತಿಕೆಗೆ ಸಾಕ್ಷಿಯೂ ಆಗಿದೆ. ಆದ್ದರಿಂದಲೇ ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಉಂಟಾದಾಗ ಪವಿತ್ರ ಗುರುಗ್ರಂಥ ಸಾಹಿಬ್ನ ವಿವಿಧ ಆವೃತ್ತಿಯನ್ನು ತರುವ ಚರ್ಚೆ ನಡೆದಿತ್ತು ಎಂದು ಸ್ಮರಿಸಿದರು.
ಮೊದಲ ಪ್ರಧಾನಿ
ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಿಂದ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ.
ಕೆಂಪುಕೋಟೆಯಲ್ಲೇ ಯಾಕೆ?
ಸಿಖ್ಖರ ಒಂಬತ್ತನೇ ಗುರು ತೇಗ್ ಬಹಾದುರ್ ಅವರ ಹತ್ಯೆಗೆ 1675ರಲ್ಲಿ ಔರಂಗಜೇಬ ಕೆಂಪುಕೋಟೆಯಿಂದಲೇ ಆದೇಶ ಹೊರಡಿಸಿದ್ದ. ಹೀಗಾಗಿ ಗುರು ತೇಗ್ ಬಹಾದುರ್ ಅವರ 400ನೇ ಜಯಂತಿ ಆಚರಣೆ ನಿಮಿತ್ತ ಈ ಭಾಷಣವನ್ನು ಸರ್ಕಾರ ಆಯೋಜಿಸಿತ್ತು ಎಂದು ಮೂಲಗಳು ತಿಳಿಸಿವೆ.
ಅಂಚೆ ಚೀಟಿ, ನಾಣ್ಯ ಬಿಡುಗಡೆ
ಗುರು ತೇಗ್ ಬಹಾದುರ್ ಅವರ 400ನೇ ಜಯಂತಿ ಸ್ಮರಣಾರ್ಥ ಅಂಚೆ ಚೀಟಿ ಮತ್ತು 400 ರೂಪಾಯಿ ನಾಣ್ಯವನ್ನು ಮೋದಿ ಬಿಡುಗಡೆ ಮಾಡಿದರು.
ಹೊಸ ಚಿಂತನೆ, ನಿರಂತರ ಪರಿಶ್ರಮ ಮತ್ತು 100% ಬದ್ಧತೆ- ಇವು ನಮ್ಮ ಸಿಖ್ ಸಮಾಜದ ಅಸ್ಮಿತೆಯಾಗಿ ಬೆಳಗುತ್ತಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಸ್ಥಳೀಯತೆ ಬಗ್ಗೆ ಮತ್ತು ಸ್ವಾವಲಂಬಿ ಭಾರತ ನಿರ್ವಿುಸುವ ಕಡೆಗೆ ಗಮನಹರಿಸಬೇಕು.
ಗುರುಗಳ ಆದರ್ಶ ಚಿಂತನೆಗಳನ್ನು ದಾರಿದೀಪವನ್ನಾಗಿ ಇಟ್ಟುಕೊಂಡು ಭಾರತ ಮುನ್ನಡೆಯುತ್ತಿದೆ. ಸೇವೆ, ಮೌಲ್ಯ ಮತ್ತು ಸಮಾಜ ವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಗುರುಗಳು ಹೊತ್ತುಕೊಂಡಿದ್ದಾರೆ. ಕೆಂಪುಕೋಟೆ ಅನೇಕ ಮಹತ್ವದ ಘಟನಾವಳಿಗಳಿಗೆ, ಕಾಲಗಳಿಗೆ ಸಾಕ್ಷಿಯಾಗಿ ನಿಂತಿದೆ. ಗುರು ತೇಗ್ ಬಹಾದುರ್ ಅವರು ಹುತಾತ್ಮರಾದುದಕ್ಕೂ ಇದು ಸಾಕ್ಷಿಯಾಗಿದೆ. ದೇಶಕ್ಕಾಗಿ ಬಲಿದಾನ ಮಾಡಿದವರ ಶೌರ್ಯವನ್ನು ಪರೀಕ್ಷಿಸಲು ಇದು ವೇದಿಕೆಯಾಗಿತ್ತು ಎಂದರು. ಕೇಂದ್ರ ಸರ್ಕಾರ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ. ಕೆಂಪು ಕೋಟೆ ಆವರಣದಲ್ಲಿ ಎರಡು ದಿನಗಳ ಕಾರ್ಯಕ್ರಮ ಬುಧವಾರ ಆರಂಭವಾಗಿತ್ತು. ಗುರುವಾರ ರಾತ್ರಿ ಪ್ರಧಾನಿ ಮೋದಿ ಭಾಗವಹಿಸಿದರು. 400 ಸಿಖ್ ಗಾಯಕರು, ಸಾಂಪ್ರದಾಯಿಕ ಸಿಖ್ ಸಮರ ವೀರರ 400 ಕುಟುಂಬದವರು ಪಾಲ್ಗೊಂಡಿದ್ದರು.
2ನೇ ಕಾರ್ಯಕ್ರಮ: ಕೆಂಪುಕೋಟೆಯಿಂದ ಪ್ರಧಾನಿ ಮಾಡುತ್ತಿರುವ 2ನೆಯ ಭಾಷಣ ಇದು. 2018ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಸರ್ಕಾರ ರಚನೆಯಾಗಿ 75 ವರ್ಷದ ಹಿನ್ನೆಲೆಯಲ್ಲಿ ಬೆಳಗ್ಗೆ 9 ಗಂಟೆಗೆ ಮೋದಿ ಕೆಂಪುಕೋಟೆಯಿಂದ ಭಾಷಣ ಮಾಡಿದ್ದರು.