ನ್ಯೂಸ್

ಡಿಜಿಟಲ್​ ಪೇಮೆಂಟ್​ನಲ್ಲಿ ಭಾರತವೇ ನಂ.1; ಈ ಹೆಗ್ಗಳಿಕೆಗೆ ಯುಪಿಐ ಕಾರಣ

ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್​ನ (ಯುಪಿಐ) ತ್ವರಿತ ಬೆಳವಣಿಗೆಯಿಂದಾಗಿ ಭಾರತದಲ್ಲಿ ಈಗ ಇತರ ದೇಶಗಳಿಗಿಂತ ಅತಿ ವೇಗವಾಗಿ ಡಿಜಿಟಲ್ ಹಣಪಾವತಿ ಸಾಧ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವರದಿ ತಿಳಿಸಿದೆ.

ಯುಪಿಐ ಪರಿಣಾಮವಾಗಿ ಭಾರತದಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳಂತಹ ಇತರ ಸಾಧನಗಳ ಬಳಕೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಮೊಬೈಲ್ ಫೋನ್ ಮೂಲಕವೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟು ನಡೆಸುತ್ತಿದ್ದಾರೆ ಎಂದು ಐಎಂಎಫ್​ನ ‘ಗ್ರೋಯಿಂಗ್ ರಿಟೇಲ್ ಡಿಜಿಟಲ್ ಪೇಮೆಂಟ್ಸ್- ದಿ ವ್ಯಾಲ್ಯೂ ಆಫ್ ಇಂಟರ್​ಆಪರೇಬಿಲಿಟಿ’ ಎಂಬ ಫಿನ್​ಟೆಕ್ ವರದಿಯಲ್ಲಿ ವಿವರಿಸಲಾಗಿದೆ.

2016ರಲ್ಲಿ ಆರಂಭವಾದ ಯುಪಿಐ ಕಡಿಮೆ ಅವಧಿಯಲ್ಲಿ ಅತ್ಯಂತ ತ್ವರಿತವಾಗಿ ಬೆಳೆದಿದೆ. ನಗದು ಬಳಕೆ ತನ್ನಿಂತಾನೇ ನೇಪಥ್ಯಕ್ಕೆ ಸರಿದಿದೆ. ಯುಪಿಐ ಈಗ ತಿಂಗಳಿಗೆ 18 ಶತಕೋಟಿಗಿಂತ ಹೆಚ್ಚು ವಹಿವಾಟುಗಳನ್ನು ನಡೆಸುತ್ತಿದೆ ಎಂದು ಅಲೆಕ್ಸಾಂಡರ್ ಕೋಪ್​ಸ್ಟೇಕ್, ದಿವ್ಯಾ ಕೀರ್ತಿ ಮತ್ತು ಮಾರಿಯಾ ಸೊಲೆಡಾಡ್ ಮಾರ್ಟಿನೆಜ್ ಪೆರಿಯಾ ಅವರು ತಯಾರಿಸಿರುವ ಈ ವರದಿಯಲ್ಲಿ ಹೇಳಲಾಗಿದೆ.