ನ್ಯೂಸ್

ಅಯೋಧ್ಯಾರಾಮ ವಿರಾಜಮಾನ: ರಾಮಭಕ್ತಿಯಲ್ಲಿ ಮಿಂದೆದ್ದ ಭಾರತ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಶತಶತಮಾನಗಳ ಹೋರಾಟ, ಕೋಟ್ಯಂತರ ಭಕ್ತರ ಕನಸು ಸಾಕಾರಕ್ಕೆ ಕೊನೆಗೂ ಶ್ರೀಕಾರ ಬಿದ್ದಿದೆ. ಭಾರತೀಯ ಸಂಸ್ಕೃತಿಯ ನೆಲೆಗಟ್ಟಾಗಿರುವ ಶ್ರೀರಾಮನ ಆದರ್ಶಗಳ ಜತೆಗೆ ದೇಶವಾಸಿಗಳ ನಂಬಿಕೆ, ಶ್ರದ್ಧೆಯನ್ನು ವಿಶ್ವಕ್ಕೆ ಸಾರುವ ಮಹಾಕಾರ್ಯ ರಾಮಮಂದಿರ ನಿರ್ವಣದ ಶಿಲಾನ್ಯಾಸ ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿ ನೆರವೇರಿದೆ. ರಾಮಜನ್ಮಭೂಮಿಯಲ್ಲೇ ಮಂದಿರ ನಿರ್ವಿುಸುವ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತಿನಂತೆ ಬುಧವಾರ ಭೂಮಿಪೂಜೆ ನೆರವೇರಿಸಿದರು. ಅದರೊಂದಿಗೆ ಮಹೋನ್ನತವಾದ ರಾಮಮಂದಿರ ಕಟ್ಟಡ ರೂಪದಲ್ಲಿ ಅವತರಿಸುವುದಷ್ಟೇ ಬಾಕಿ ಉಳಿದಂತಾಗಿದೆ. ಅಸಂಖ್ಯಾತ ರಾಮಭಕ್ತರ ಪಾಲಿಗೆ ಭವ್ಯವಾದ ದಿವ್ಯವಾದ ಮಂದಿರದಲ್ಲಿ ವಿರಾಜಮಾನ ಶ್ರೀರಾಮನನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆ, ಕಾತರಗಳು ದುಪ್ಪಟ್ಟಾಗಿವೆ.

ಕರ್ನಾಟಕ ನಂಟು

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದ ನಂಟು ವಿಶೇಷವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಹಲವು ಬಾರಿ ರಾಜ್ಯದ ಹೆಸರು ಪ್ರಸ್ತಾಪವಾಯಿತು. ‘ಜಗನ್ನಾಥ ಪುರಿಯಿಂದ ಬದರಿನಾಥದವರೆಗೆ, ಕನ್ಯಾಕುಮಾರಿಯಿಂದ ಖೀರ್ ಭವಾನಿವರೆಗೆ, ಕೋಟೇಶ್ವರದಿಂದ ಕಾಮಾಕ್ಯದವರೆಗೆ, ಸೋಮನಾಥದಿಂದ ಕಾಶಿ ವಿಶ್ವನಾಥದವರೆಗೆ, ಲಕ್ಷದ್ವೀಪದಿಂದ ಲೇಹ್​ವರೆಗೆ, ಸಮೇದ್ ಶಿಖರದಿಂದ ಶ್ರವಣಬೆಳಗೊಳದವರೆಗೆ ಇಡೀ ಭಾರತ ರಾಮಮಯವಾಗಿದೆ’ ಎಂದರು. ವಿವಿಧ ಭಾಷೆಗಳಲ್ಲಿ ರಾಮಾಯಣದ ರೂಪಾಂತರ ಹೆಸರಿಸುವ ಸಂದರ್ಭದಲ್ಲಿ ನಾಗಚಂದ್ರ ಬರೆದಿರುವ ಕನ್ನಡದ ಕುಮುದೇಂದು ರಾಮಾಯಾಣವನ್ನು ಮೋದಿ ಸ್ಮರಿಸಿದರು. ಬೆಂಗಳೂರಿನ ಶಿಲ್ಪಿ ರಾಮ ಮೂರ್ತಿ ಸಿದ್ಧಪಡಿಸಿರುವ ಕೋದಂಡ ರಾಮನ ಪ್ರತಿಮೆ ಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾರ್ಯಕ್ರಮದ ವೇದಿಕೆಯಲ್ಲಿ ಮೋದಿಗೆ ಸ್ಮರಣಿಕೆಯಾಗಿ ನೀಡಿದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳು ಹಾಗೂ ಮಾದಾರ ಚೆನ್ನಯ್ಯ ಶ್ರೀಗಳು ಭಾಗವಹಿಸಿದ್ದರು.

ಪ್ರಧಾನಿಯವರ ದೂರದೃಷ್ಟಿ ಚಿಂತನೆಯಿಂದಾಗಿ ಇಂದು ಮಂದಿರದ ಕನಸು ನನಸಾಗುತ್ತಿದೆ. 5 ಶತಮಾನಗಳ ಹಿಂದಿನ ಸಂಕಲ್ಪ ಪ್ರಜಾಪ್ರಭುತ್ವದ ಮಾದರಿಯಲ್ಲೇ ಸಾಕಾರಗೊಳ್ಳುತ್ತಿದೆ. | ಯೋಗಿ ಆದಿತ್ಯನಾಥ ಉತ್ತರಪ್ರದೇಶ ಸಿಎಂ

ಮೋದಿ ಸಂಕಲ್ಪ

  • ಹಲವಾರು ವರ್ಷಗಳಿಂದ ನಮ್ಮ ರಾಮಲಲ್ಲಾ ಸಣ್ಣ ಟೆಂಟ್​ನಲ್ಲಿ ನೆಲೆಸಬೇಕಾಗಿತ್ತು. ಇನ್ನು ಮುಂದೆ ಆತ ರಾಮ ಭಕ್ತರು ನಿರ್ಮಾಣ ಮಾಡುತ್ತಿರುವ ಭವ್ಯ ಮಂದಿರದೊಳಗೆ ವಿರಾಜಮಾನಗೊಳ್ಳಲಿದ್ದಾನೆ
  • ಆ.15 ಸ್ವಾತಂತ್ರ್ಯ ದಿನದಂತೆ, ಆ.5 ಕೂಡ ರಾಮನ ದೇವಾಲಯಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಭಕ್ತರಿಗೆ ಐತಿಹಾಸಿಕ ದಿನ
  • ಶ್ರೀರಾಮನ ಅದ್ಭುತ ಶಕ್ತಿಯನ್ನು ನೋಡಿ - ಕಟ್ಟಡಗಳು ನಾಶವಾದವು, ಅವನ ಅಸ್ತಿತ್ವವನ್ನೇ ನಿಮೂಲ ಮಾಡುವ ಹಲವು ಪ್ರಯತ್ನಗಳು ನಡೆದವು, ರಾಮಜನ್ಮಭೂಮಿ ಇಂದು ಮುಕ್ತವಾಗಿದೆ. ಎಲ್ಲಿ ಕೆಡವಲಾಗಿತ್ತೋ ಅಲ್ಲೇ ಮಂದಿರ ಮೇಲೆದ್ದು ನಿಲ್ಲಲಿದೆ.
  • ದೇವಾಲಯ ನಿರ್ವಣದ ನಂತರ ಅಯೋಧ್ಯೆಯ ಭವ್ಯತೆ ಹೆಚ್ಚಾಗುವುದಲ್ಲದೆ, ಆರ್ಥಿಕವಾಗಿಯೂ ಬದಲಾಗಲಿದೆ. ಪ್ರತಿ ಕ್ಷೇತ್ರದಲ್ಲೂ ಹೊಸ ಅವಕಾಶ ಸೃಷ್ಟಿಯಾಗಲಿದೆ
  • ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಸಾಕಷ್ಟು ರಾಮಾಯಣ ಕುರುಹುಗಳಿವೆ. ರಾಮ ಇಂದಿಗೂ ಅಲ್ಲಿ ಪೂಜನೀಯ, ಕಾಂಬೋಡಿಯಾ, ವಾಲೋ, ಮಲೇಷಿಯಾ, ಥಾಯ್ಲೆಂಡ್, ಇರಾನ್, ಚೀನಾದಲ್ಲೂ ರಾಮಾಯಣಗಳಿವೆ.
ಓರ್ವ ಮೋದಿ ಹಾಗೂ ಓರ್ವ ಯೋಗಿ ಇರುವಾಗ ದೇಗುಲ ನಿರ್ವಿುಸಲಾಗದಿದ್ದರೆ ಇನ್ನು ಯಾವಾಗ ಸಾಧ್ಯ? ಕೋಟ್ಯಂತರ ಭಕ್ತರ ಕನಸು ನನಸಾಗುವ ಕಾಲ ಬಂದಿದೆ. | ಮಹಾಂತ ನೃತ್ಯ ಗೋಪಾಲ್ ದಾಸ್ ರಾಮಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ

ಶಿಲಾನ್ಯಾಸದ ಕ್ಷಣ ಕ್ಷಣ

  • ಶ್ರಾವಣ ಮಾಸ, ಕೃಷ್ಣಪಕ್ಷ, ಅಭಿಜಿನ್ ಮುಹೂರ್ತದಲ್ಲಿ ಮಧ್ಯಾಹ್ನ 12.44 ಗಂಟೆಗೆ ಭೂಮಿಪೂಜೆ ನೆರವೇರಿತು
  • 32 ಸೆಕೆಂಡ್​ಗಳ ಮುಹೂರ್ತದಲ್ಲಿ ಪೂರ್ಣಾಹುತಿ ಪೂರ್ಣ, 40 ನಿಮಿಷ ನಡೆದ ಭೂಮಿ ಪೂಜೆಯ ಸಂಪೂರ್ಣ ಪ್ರಕ್ರಿಯೆ
  • ಭೂಮಿಪೂಜೆಗೆ 22.6 ಕೆಜಿ ತೂಕದ ಐದು ಇಟ್ಟಿಗೆ, ದೇಶದ 2 ಸಾವಿರ ಪವಿತ್ರ ಕ್ಷೇತ್ರಗಳ ಮೃತ್ತಿಕೆ, 100ಕ್ಕೂ ಅಧಿಕ ನದಿಗಳ ಪವಿತ್ರಜಲ ಬಳಕೆ, ಪೂಜೆ ವೇಳೆ ಋತ್ವಿಜರಿಂದ ವೇದಮಂತ್ರ, ಭಕ್ತರಿಂದ ರಾಮಾಯಣ ಶ್ಲೋಕ ಪಠಣ
  • ಪೂಜೆ ವೇಳೆ ಭೂತಾಯಿಗೆ ಆರತಿ ಮಾಡಿ ನಮಸ್ಕರಿಸಿ, ಮಣ್ಣನ್ನು ಶಿರಕ್ಕೆ ಧರಿಸಿದ ಪ್ರಧಾನಿ
  • ಬಳಿಕ ಭೂಮಿ ಪೂಜೆಗೆ ನಿಗದಿಪಡಿಸಿದ್ದ ಸ್ಥಳದ ಪ್ರದಕ್ಷಿಣೆ
  • ಕಾಲಕಾಲಕ್ಕೆ ಮಳೆ ಬರಲಿ , ಸಸ್ಯ ಸಂಪತ್ತು ವೃದ್ಧಿಯಾಗಲಿ ಎಂದು ಆಶೀರ್ವದಿಸಿದ ಪೂಜ್ಯರು
ರಾಮ ಮಂದಿರ ಶಿಲಾನ್ಯಾಸದಿಂದ ಭಾರತವನ್ನು ಆತ್ಮನಿರ್ಭರ ಗೊಳಿಸಲು ಆತ್ಮವಿಶ್ವಾಸ ಲಭ್ಯವಾಗಿದೆ. ಇಡೀ ವಿಶ್ವಕ್ಕೆ ಶಾಂತಿ ನೀಡಬಲ್ಲ ರಾಷ್ಟ್ರ ಭಾರತ. ಹಿಂದು ಧರ್ಮ ಎಲ್ಲರನ್ನೂ ಮುನ್ನೆಲೆಗೆ ತರುತ್ತದೆ. | ಮೋಹನ್ ಭಾಗವತ್ ಆರೆಸ್ಸೆಸ್ ಮುಖ್ಯಸ್ಥ

ಮೋದಿ ದಿನಚರಿ

  • ಬೆಳಗ್ಗೆ 9.35 ದೆಹಲಿಯಿಂದ ನಿರ್ಗಮನ
  • 10.30 ಲಖನೌ ವಿಮಾನ ನಿಲ್ದಾಣಕ್ಕೆ ಆಗಮನ
  • 10.40 ಹೆಲಿಕಾಪ್ಟರ್​ನಲ್ಲಿ ಅಯೋಧ್ಯೆಗೆ ಪ್ರಯಾಣ
  • 11.30 ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮನ
  • 11.40 ಹನುಮಾನ್​ಗಡಿ ಬಳಿಕ ಸರಯೂ ನದಿಗೆ ಪೂಜೆ
  • ಮಧ್ಯಾಹ್ನ 12 ರಾಮಜನ್ಮಭೂಮಿಗೆ ಆಗಮನ
  • 12.30 ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿ
  • 12.44 ರಾಮಮಂದಿರ ನಿರ್ವಣಕ್ಕೆ ಅಡಿಗಲ್ಲು ಹಾಕಿದ ಪ್ರಧಾನಿ, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ
  • 1.10 ಸ್ವಾಮಿ ನೃತ್ಯಗೋಪಾಲ್ ದಾಸ್ ಸೇರಿ ರಾಮಜನ್ಮಭೂಮಿ ಟ್ರಸ್ಟ್​ನ ಇತರ ಸದಸ್ಯರ ಜತೆ ಸಭೆ
  • 1.40 ದೇಶ ಉದ್ದೇಶಿಸಿ ಭಾಷಣ
  • 2.05 ಹೆಲಿಕಾಪ್ಟರ್ ಮೂಲಕ ಲಖನೌಗೆ ಪ್ರಯಾಣ