ಶಿವಮೊಗ್ಗ : ಭಾರತದಲ್ಲಿ ವಚನಕಾರರು, ದಾಸರು, ಮಹನೀಯರು ಶ್ರೇಷ್ಠ ಪರಂಪರೆಯನ್ನು ಉಳಿಸಿದ್ದಾರೆ. ಇದೇ ಕಾರಣಕ್ಕೆ ಈ ದೇಶ ಸಾಂಸ್ಕೃತಿಕ ರಾಷ್ಟ್ರವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ನಿಜಶರಣ ಅಂಬಿಗದ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಶರಣರ ಪಂಕ್ತಿಯಲ್ಲಿ ಶ್ರೇಷ್ಠ ಸ್ಥಾನ ಗಳಿಸಿದ್ದಾರೆ. ಆ ಮೂಲಕ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಅಂಬಿಗರ ಚೌಡಯ್ಯ ಅವರು ಜೀವನದಲ್ಲಿ ಸದಾ ನಿಜವನ್ನು ನುಡಿದರು. ನುಡಿದ ರೀತಿಯಲ್ಲೇ ಜೀವನ ನಡೆಸಿದರು. ಆ ಮೂಲಕವೇ ಅವರು ನಿಜಶರಣರಾದರು ಎಂದು ತಿಳಿಸಿದರು.
ಅಂಬಿಗರ ಚೌಡಯ್ಯ ಅವರಿಗೆ ಯಾವುದೇ ಜಾತಿ ವ್ಯವಸ್ಥೆ ಅಡ್ಡಿಯಾಗಲಿಲ್ಲ. ಅವರಲ್ಲಿದ್ದ ಜ್ಞಾನದ ಕಾರಣದಿಂದಾಗಿ ಬಸವಣ್ಣನವರ ಅನುಭವ ಮಂಟಪದಲ್ಲಿಯೂ ಜಾಗ ಪಡೆದಿದ್ದರು. ಅಂಬಿಗರ ಚೌಡಯ್ಯ ಅವರು ಕಾಯಕದಿಂದ ಶ್ರೇಷ್ಠತೆ ಪಡೆದುಕೊಂಡಿದ್ದಾರೆ. ಕಾಯಕದ ಮೂಲಕ ಬದುಕಿನಲ್ಲಿ ಖುಷಿಯನ್ನು ಕಂಡುಕೊಂಡುವರು. ತಮ್ಮ ವಚನಗಳ ಮೂಲಕ ಜನಮಾನಸದಲ್ಲಿ ಅನೇಕ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸಿದರು. ಇಂತಹ ಮಹಾನೀಯರ ವಚನಗಳನ್ನು ಕೈಪಿಡಿ ಮಾಡಿ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಹಂಚಬೇಕು. ಆಗ ಇಂತಹ ಜಯಂತಿ ಆಚರಣೆಗೆ ಅರ್ಥ ದೊರಕುತ್ತದೆ ಎಂದರು.
ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಪ್ರೊ.ಸತ್ಯನಾರಾಯಣ, ಈಗಿನ ಯುಗ, ಜ್ಞಾನ ಯುಗ. ಅದನ್ನು ವೃದ್ಧಿಸುವ ಅಗತ್ಯವಿದೆ. ಅದಕ್ಕೆ ಅಂಬಿಗರ ಚೌಡಯ್ಯನವರ ವಚನ ಸರಿಯಾದ ಮಾರ್ಗವಾಗಿದೆ. ನಮ್ಮ ಜೀವನದ ಮೌಲ್ಯ ಹೆಚ್ಚಾಗಬೇಕು. ಜೀವನ ಸಾರ್ಥಕವಾಗಬೇಕು ಎಂದರೆ ಅದು ಅಂಬಿಗರ ವಚನದಿಂದ ಮಾತ್ರ. ಅದು ನಮ್ಮನ್ನು ಸದಾ ಎಚ್ಚರಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ತಾಲೂಕು ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮುಂತಾದವರಿದ್ದರು.