ಶಿವಮೊಗ್ಗ: ಸಮಸ್ತ ಲೋಕದ ಹಿತ ಬಯಸುವ ಭಾರತ, ಲೋಕಕ್ಷೇಮದ ಕಾರಣಕ್ಕಾಗಿ ದೀರ್ಘ ಮತ್ತು ದೂರದೃಷ್ಟಿ ಹೊಂದಿ ಜಗತ್ತಿಗೆ ಯೋಗ ಪರಿಚಯಿಸಿದೆ ಎಂದು ಕೂಡಲಿ ಶೃಂಗೇರಿ ಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದರು.
ಯೋಗ ಶಿಕ್ಷಣ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಯೋಗದಿಂದ ಉಂಟಾಗುವ ಸತ್ಪರಿಣಾಮಗಳ ಬಗ್ಗೆ ಜಗತ್ತಿಗೆ ಪರಿಚಯವಾಗುತ್ತಿದೆ. ವಸುಧೈವ ಕುಟುಂಬಕಂ ಎಂಬ ಭಾರತದ ಆದರ್ಶವನ್ನು ವಿಶ್ವವೇ ಬೆರಗುಗಣ್ಣುಗಳಿಂದ ನೋಡುತ್ತಿದೆ. ಹಿಂದು ಧರ್ಮ ವಿರೋಧಿಸುವ ಪರಂಪರೆ ದೇಶಗಳು ಕೂಡ ಯೋಗ ದಿನದಂದು ಓಂಕಾರ ಹೇಳುತ್ತಾರೆ ಎಂದು ತಿಳಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಮಾತನಾಡಿ, ದೃಶ್ಯ ಮತ್ತು ಅದೃಶ್ಯದ ಸಮಭಾವವೇ ಯೋಗ. ಆರಂಭದಿಂದಲೂ ಯೋಗಭ್ಯಾಸ ಅನುಸರಿಸಿದರೆ ಕಾಯಿಲೆಗಳು ದೂರವಾಗುತ್ತವೆ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಕ್ರಮವಾಗಿ ಯೋಗಾಭ್ಯಾಸ ದಿವ್ಯ ಔಷಧವಾಗಿದೆ. 1984ರಲ್ಲಿ ಭೂಪಾಲ್‌ನಲ್ಲಿ ನಡೆದ ಅನಿಲ ದುರಂತದ ವೇಳೆ ಆ ಪ್ರದೇಶದಲ್ಲಿದ್ದ ಯೋಗಾಭ್ಯಾಸಿಗಳು ಮತ್ತು ಹೋಮ, ಹವನ ಮಾಡುತ್ತಿರುವ ಮನೆಗಳಲ್ಲಿ ಹೆಚ್ಚಿನ ಹಾನಿಯಾಗಿರಲಿಲ್ಲ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಹಿರಿಯ ಯೋಗ ಪರಿಚಾರಕ ಡಾ. ಭ.ಮ.ಶ್ರೀಕಂಠ, ಯೋಗ ಸಮಿತಿ ಅಧ್ಯಕ್ಷ ಡಾ. ಎಚ್.ವೈ.ಸಂಜಯ್ ಕುಮಾರ್ ಇತರರಿದ್ದರು.