India: ಪ್ರಧಾನಿ ನರೇಂದ್ರ ಮೋದಿಯು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರೊಂದಿಗೆ ಯುಕ್ರೇನ್ ಯುದ್ಧ ತಂತ್ರದ ಬಗ್ಗೆ ಕೇಳಲು ಕರೆ ಮಾಡಿದ್ದಾರೆ ಎಂಬ ನ್ಯಾಟೋದ ಹಿರಿಯ ನಾಯಕತ್ವದ ಹೇಳಿಕೆಗಳಿಗೆ ಭಾರತ ತಿರುಗೇಟು ನೀಡಿದೆ.
ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ನೀಡಿದ್ದ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಈ ಹೇಳಿಕೆಯು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಪ್ರಧಾನಿ ಮೋದಿಯವರು ಅಧ್ಯಕ್ಷ ಪುಟಿನ್ರೊಂದಿಗೆ ಸೂಚಿಸಿದ ಯಾವುದೇ ಹಂತದಲ್ಲಿ ಮಾತನಾಡಿಲ್ಲ. ಇಂತಹ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಜೈಸ್ವಾಲ್, ನ್ಯಾಟೋದಂತಹ ಪ್ರಮುಖ ಸಂಸ್ಥೆಯ ನಾಯಕತ್ವವು ಸಾರ್ವಜನಿಕ ಹೇಳಿಕೆಗಳಲ್ಲಿ ಹೆಚ್ಚಿನ ನಿಖರತೆಯನ್ನು ನಿರ್ವಹಿಸುತ್ತದೆ ಎಂದು ಭಾರತ ನಿರೀಕ್ಷಿಸುತ್ತದೆ. ಪ್ರಧಾನಿಯವರ ಮಾತುಕತೆಗಳನ್ನು ತಪ್ಪಾಗಿ ಪ್ರತಿನಿಧಿಸುವ ಅಥವಾ ಎಂದಿಗೂ ನಡೆಯದ ಸಂಭಾಷಣೆಗಳನ್ನು ಸೂಚಿಸುವ ಊಹಾಪೋಹ ಅಥವಾ ಅಸಡ್ಡೆ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಅಮೆರಿಕ ವಿಧಿಸಿರುವ ಸುಂಕಕ್ಕೆ ಭಾರತವು ರಷ್ಯಾವನ್ನು ತನ್ನ ಯುಕ್ರೇನ್ ಯುದ್ಧ ತಂತ್ರವನ್ನು ವಿವರಿಸುವಂತೆ ಕೇಳುವಂತೆ ಮಾಡಿದೆ ಎಂದು ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟದ ಪ್ರಧಾನ ಕಾರ್ಯದರ್ಶಿ ರುಟ್ಟೆ ಗುರುವಾರ ಹೇಳಿಕೊಂಡಿದ್ದರು. ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ಪುಟಿನ್ರೊಂದಿಗೆ ನೇರವಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದರು. (ಏಜೆನ್ಸೀಸ್)