ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ 
ನ್ಯೂಸ್

ಆರ್ಥಿಕ ಬೆಳವಣಿಗೆ ಸಾಮರ್ಥ್ಯ ಹೊಂದಿರುವ ಭಾರತ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ- Nirmala Sitharaman

ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘ, ಶನಿವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಸಂಗಮ-2026’ ಕಾರ್ಯಕ್ರಮದಲ್ಲಿ ದೇಶದಲ್ಲಿ ಕೃತಕ ಬುದ್ಧಿಮತ್ತೆ (ಎಐ), ರಕ್ಷಣಾ ಉತ್ಪಾದನೆ, ತಂತ್ರಜ್ಞಾನ, ಕೃಷಿ ಆಧುನೀಕರಣ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಆಗುತ್ತಿರುವ ಸುಧಾರಣೆಗಳ ಬಗ್ಗೆ ಎಳೆ,ಎಳೆಯಾಗಿ ಮಾತನಾಡಿದರು.

ಬೆಂಗಳೂರು: (Union Minister Nirmala Sitharaman) ಜಾಗತಿಕ ಸವಾಲುಗಳ ನಡುವೆಯೂ ಭಾರತವು ಆರ್ಥಿಕ ಬೆಳವಣಿಗೆ ಸಾಧಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘ, ಶನಿವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಸಂಗಮ-2026’ ಕಾರ್ಯಕ್ರಮದಲ್ಲಿ ದೇಶದಲ್ಲಿ ಕೃತಕ ಬುದ್ಧಿಮತ್ತೆ (ಎಐ), ರಕ್ಷಣಾ ಉತ್ಪಾದನೆ, ತಂತ್ರಜ್ಞಾನ, ಕೃಷಿ ಆಧುನೀಕರಣ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಆಗುತ್ತಿರುವ ಸುಧಾರಣೆಗಳ ಬಗ್ಗೆ ಎಳೆ,ಎಳೆಯಾಗಿ ಮಾತನಾಡಿದರು.

2014ರ ಪೂರ್ವದಲ್ಲಿ ಭಾರತದ ಆರ್ಥಿಕತೆಯು ಜಾಗತಿಕವಾಗಿ ಅಸ್ಥಿರ ಆರ್ಥಿಕತೆಯ ಪಟ್ಟಿಯಲ್ಲಿತ್ತು. ಈ ಪರಿಸ್ಥಿತಿಯಿಂದ ಹೊರಬರಲು ನಮ್ಮ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದ ಅಕ್ರಮ ಪದ್ಧತಿಗಳನ್ನು ತೆಗೆದುಹಾಕುವ ಮೂಲಕ ವ್ಯವಸ್ಥೆಯನ್ನು ಸ್ವಚ್ಛಗೊಳಿಸಿತು. ಬ್ಯಾಂಕ್‌ಗಳನ್ನು ಮರುಸ್ಥಾಪಿಸಲು ಅಂದಾಜು 3 ಲಕ್ಷ ಕೋಟಿ ರೂ.ಬಂಡವಾಳದ ನೆರವು ನೀಡಲಾಯಿತು. ಭಾರತೀಯ ನವೋದ್ಯಮಗಳು ಸಾಫ್ಟ್​​​ವೇರ್‌ಗೆ ಸೀಮಿತವಾಗದೆ, ಹಾರ್ಡ್‌ವೇರ್ ಮತ್ತು ಸೆಮಿಕಂಡಕ್ಟರ್‌ಗಳತ್ತ ಮುನ್ನಡೆಯುತ್ತಿವೆ. ದೇಶದ ಮುಂದಿನ ಪ್ರಮುಖ ಆರ್ಥಿಕ ಶಕ್ತಿಯು ಎಐ ಮೂಲಸೌಕರ್ಯವಾಗಲಿದೆ ಎಂದು ಕೇಂದ್ರ ಸಚಿವೆ ಹೇಳಿದರು.

ಹಿಂದೆ ಭಾರತವು ಕೇವಲ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶವಾಗಿತ್ತು. ಆದರೆ, ಇಂದಿನ ದಿನಗಳಲ್ಲಿ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ವಿಶ್ವದ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆದಿದೆ. ಡ್ರೋನ್‌ಗಳು, ಮಾನವರಹಿತ ವೈಮಾನಿಕ ಸಾಧನಗಳು, ಆಧುನಿಕ ಮಿಲಿಟರಿ ತಂತ್ರಜ್ಞಾನದಲ್ಲಿ ಭಾರತೀಯ ಖಾಸಗಿ ರಂಗವು ಅದ್ಭುತ ಸಾಧನೆ ತೋರುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಕೋವಿಡ್ ಮತ್ತು ಜಾಗತಿಕ ಭೌಗೋಳಿಕ, ರಾಜಕೀಯ ಸಂಘರ್ಷಗಳ ಹೊರತಾಗಿಯೂ ಭಾರತ, 6 ವರ್ಷಗಳಲ್ಲಿ ಶೇ.7.8 ಜಿಡಿಪಿ ಬೆಳವಣಿಗೆ ದಾಖಲಿಸಿದೆ ಎಂದು ನಿರ್ಮಲಾ ಸೀತಾರಾಮನ್ ಸಂತಸ ವ್ಯಕ್ತಪಡಿಸಿದರು.

ಐಐಟಿ ಮದ್ರಾಸ್ ನಿರ್ದೇಶಕ ಪ್ರೊ.ವಿ. ಕಾಮಕೋಟಿ, ಉದ್ಯಮಿ ಡಾ.ಶ್ರೀಧರ್ ವೆಂಬು ಸೇರು ಪ್ರಾಧ್ಯಕಪಕರು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಕಸಿತ ಭಾರತ ಸಾಧ್ಯ

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ವಿಕಸಿತ ಭಾರತ-2047 ಗುರಿಯನ್ನು ಸಾಕಾರಗೊಳಿಸಲು ಸ್ವಾವಲಂಬನೆ, ತಂತ್ರಜ್ಞಾನ ನಾವೀನ್ಯತೆ ಹಾಗೂ ನವೋದ್ಯಮಗಳ ಬೆಳವಣಿಗೆ ಅತ್ಯಂತ ಅನಿವಾರ್ಯವಾಗಿದೆ. ಭಾರತವು ಕೇವಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ದೇಶವಾಗಿ ಉಳಿಯದೆ, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಸೃಷ್ಟಿಸುವ ಮತ್ತು ರಫ್ತು ಮಾಡುವ ಮುಂಚೂಣಿ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದರು. ಇಂದು ದೇಶದಲ್ಲಿ ಕಲ್ಲಿದ್ದಲು ಆಮದು ಬಹುತೇಕವಾಗಿ ಸ್ಥಗಿತಗೊಂಡಿದೆ. 2012ರ ಜುಲೈನಲ್ಲಿ ಗ್ರಿಡ್ ವೈಫಲ್ಯದಿಂದ ಉತ್ತರ ಭಾರತದ ಬಹುತೇಕ ಭಾಗ ಕತ್ತಲಲ್ಲಿ ಮುಳುಗಿದ್ದ ಸ್ಥಿತಿಯಲ್ಲಿತ್ತು. ಆದರೆ, ಇಂದಿನ ದಿನಮಾನಗಳಲ್ಲಿ ದೇಶದ ಒಟ್ಟಾರೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 2014ರಲ್ಲಿದ್ದ 249 ಗಿಗಾವ್ಯಾಟ್‌ನಿಂದ ಬರೋಬ್ಬರಿ 552 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಲಾಜಿಸ್ಟಿಕ್ಸ್, ಉತ್ಪಾದನೆ, ವಿದ್ಯುತ್ ವೆಚ್ಚಗಳನ್ನು ತಗ್ಗಿಸುವ ಪ್ರಧಾನಿ ಮೋದಿಯವರ ಕಾರ್ಯತಂತ್ರವೂ ಫಲ ನೀಡುತ್ತಿದೆ. 120 ಭಾರತೀಯ ಡೀಪ್‌ಟೆಕ್ ನವೋದ್ಯಮಗಳು ಜಾಗತಿಕ ಮಟ್ಟದಲ್ಲಿ 250 ಮಿಲಿಯನ್ ಡಾಲರ್‌ಗೂ ಅಧಿಕ ಬಂಡವಾಳ ಸಂಗ್ರಹಿಸಿರುವುದು ಭಾರತೀಯ ತಂತ್ರಜ್ಞಾನದ ಮೇಲಿರುವ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ ಎಂದರು.

2014ರಲ್ಲಿ 350 ಇದ್ದ ಭಾರತದ ನವೋದ್ಯಮಗಳ ಸಂಖ್ಯೆ ಇಂದು 2.40 ಲಕ್ಷಕ್ಕೆ ಏರಿಕೆಯಾಗಿದೆ. ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತವು 81ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಜಿಗಿದಿದೆ. ಭಾರತದ ಯುಪಿಐ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಿ-20 ನಾಯಕರನ್ನೇ ನಿಬ್ಬೆರಗಾಗಿಸಿದೆ. ದೇಶದಲ್ಲಿ ಪ್ರತಿ ಅರ್ಧ ಗಂಟೆಗೆ 20 ಮಿಲಿಯನ್ ಡಿಜಿಟಲ್ ವಹಿವಾಟುಗಳು ನಡೆಯುತ್ತಿವೆ.

- ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ.