ನ್ಯೂಸ್

H1BClampdown | H1-B ವೀಸಾ ಶುಲ್ಕ ಹೆಚ್ಚಿಸಿದ ಡೊನಾಲ್ಡ್​​ ಟ್ರಂಪ್​; ಪ್ರಧಾನಿ ಮೋದಿಯನ್ನು ದುರ್ಬಲ ನಾಯಕ ಎಂದ ರಾಹುಲ್​ ಗಾಂಧಿ!

H1BClampdown: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು H1-B ವೀಸಾ ಅರ್ಜಿಗಳ ಮೇಲೆ $100,000 ಶುಲ್ಕವನ್ನು ಘೋಷಿಸಿರುವುದನ್ನು ಕಾಂಗ್ರೆಸ್ ನಾಯಕರು ಶನಿವಾರ (ಸೆ 20) ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನು ದುರ್ಬಲ ನಾಯಕ ಎಂದು ಕರೆದರು, ಇದು ಭಾರತದ ಪ್ರತಿಭೆಗಳಿಗೆ ತೀವ್ರ ಹೊಡೆತ ನೀಡುವ ಕ್ರಮವಾಗಿದ್ದು, ಸರ್ಕಾರ ದೇಶದ ಹಿತಾಸಕ್ತಿಗಳನ್ನು ಕಾಪಾಡಲು ವಿಫಲವಾಗಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ತಮ್ಮ 2017 ರಲ್ಲಿನ "ಭಾರತ ದುರ್ಬಲ ಪ್ರಧಾನಿಯನ್ನು ಹೊಂದಿದೆ" ಎಂದು ಬರೆದಿದ್ದು ಪೊಸ್ಟ್​ನ ಸ್ಕ್ರೀನ್‌ಶಾಟ್‌ಗಳ ಜೊತೆಗೆ ಅದನ್ನು ಮರು ಪೋಸ್ಟ್ ಮಾಡಿದ್ದಾರೆ. H-1B ವೀಸಾಗಳ ಕುರಿತು ಅಮೆರಿಕದ ನಿರ್ಧಾರದ ಬಗ್ಗೆ ಮತ್ತೊಂದು ಲೇಖನವನ್ನು ಹಂಚಿಕೊಂಡಿದ್ದಾರೆ, ಇದು ಸಾವಿರಾರು ಭಾರತೀಯ ಆಕಾಂಕ್ಷಿಗಳ ಮೇಲೆ ಪರಿಣಾಮ ಬೀರಲಿದೆ.

ಇದೇ ವಿಷಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸರ್ಕಾರವನ್ನು ಟೀಕಿಸಿದ್ದು, ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಮೋದಿಯವರ ಹುಟ್ಟುಹಬ್ಬದ ಕರೆಯ ನಂತರದ ಈ ನೀತಿಯನ್ನು "ರಿಟರ್ನ್ ಗಿಫ್ಟ್" ಎಂದು ಕರೆದಿದ್ದಾರೆ. ಹುಟ್ಟುಹಬ್ಬದ ಕರೆಯ ನಂತರ ಸ್ವೀಕರಿಸುವ ರಿಟರ್ನ್ ಉಡುಗೊರೆಗಳಿಂದ ಭಾರತೀಯರು ಹೆಚ್ಚಾಗಿ ನೋವು ಅನುಭವಿಸುವಂತಾಗಿದೆ. ನಿಮ್ಮ 'ಅಬ್ಕಿ ಬಾರ್, ಟ್ರಂಪ್ ಸರ್ಕಾರ್' ಸರ್ಕಾರದಿಂದ ಹುಟ್ಟುಹಬ್ಬದ ರಿಟರ್ನ್ ಉಡುಗೊರೆಗಳು! H-1B ವೀಸಾಗಳಲ್ಲಿ $100,000 ವಾರ್ಷಿಕ ಶುಲ್ಕವು ಭಾರತೀಯ ಟೆಕ್ ಕಾರ್ಮಿಕರಿಗೆ ಅತ್ಯಂತ ಕಠಿಣ ಪರಿಣಾಮ ಬೀರುತ್ತದೆ, H-1B ವೀಸಾ ಹೊಂದಿರುವವರಲ್ಲಿ 70% ಭಾರತೀಯರು" ಎಂದು ಖರ್ಗೆ ಬರೆದಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉಲ್ಲೇಖಿಸಿ, ಹಿಂದಿನ ರಾಜತಾಂತ್ರಿಕ ವಿವಾದದ ಸಂದರ್ಭದಲ್ಲಿ ಸಿಂಗ್​​ ತೆಗೆದುಕೊಂಡ ದೃಢ ನಿಲುವನ್ನು ನೆನಪಿಸಿಕೊಂಡರು. ಪ್ರಧಾನಿ ಮೋದಿ ಕಾರ್ಯತಂತ್ರದ ಮೌನ ಮತ್ತು ಜೋರಾದ ಧ್ವನಿಗೆ ಆದ್ಯತೆ ನೀಡುವುದು ಭಾರತ ಮತ್ತು ಅದರ ನಾಗರಿಕರ ರಾಷ್ಟ್ರೀಯ ಹಿತಾಸಕ್ತಿಗೆ ಹೊರೆಯಾಗಿದೆ ಎಂದು ಅವರು ಹೇಳಿದರು.(ಏಜೆನ್ಸೀಸ್​​)