ರಕ್ಷಣಾ ವಲಯದಲ್ಲಿ ದೇಶವನ್ನು ಆದಷ್ಟು ಸ್ವಾವಲಂಬಿಯಾಗಿಸಬೇಕು ಎಂದು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಆತ್ಮನಿರ್ಭರ ಪರಿಕಲ್ಪನೆಯನ್ನು ಈ ಕ್ಷೇತ್ರಕ್ಕೂ ವಿಸ್ತರಿಸಲಾಗಿದೆ. ಈ ನಡುವೆ, ಭಾರತದ ಶಸ್ತ್ರಾಸ್ತ್ರ ಆಮದು ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ ಎಂಬ ಸಂಗತಿ ವರದಿಯೊಂದರಿಂದ ತಿಳಿದುಬಂದಿದೆ. ಜಾಗತಿಕ ಶಸ್ತ್ರಾಸ್ತ್ರ ವ್ಯವಹಾರದ ಮೇಲೆ ನಿಗಾ ಇರಿಸಿ, ಅಂಕಿಅಂಶಗಳನ್ನು ದಾಖಲಿಸುವ ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಶನ್ (ಎಸ್ಐಪಿಆರ್ಐ) ಈ ವರದಿ ಬಿಡುಗಡೆ ಮಾಡಿದೆ. ಆ ಪ್ರಕಾರ, 2010-15 ಮತ್ತು 2016-20ರ ಅವಧಿಯಲ್ಲಿ ಭಾರತದ ರಕ್ಷಣಾ ಸಾಮಗ್ರಿ ಆಮದಿನ ಪ್ರಮಾಣ ಶೇಕಡ 33ರಷ್ಟು ಕಡಿಮೆಯಾಗಿದೆ. ಹೀಗಿದ್ದರೂ, ಸೌದಿ ಅರೇಬಿಯಾ ನಂತರದಲ್ಲಿ ಭಾರತ ರಕ್ಷಣಾ ಆಮದಿನ ಎರಡನೇ ದೊಡ್ಡ ದೇಶವಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಆಮದು ಹೆಚ್ಚಿಗೆಯಾಗಿದೆ. ಉದಾ: ಸೌದಿ ಅರೇಬಿಯಾದಲ್ಲಿ ಶೇ.61 ಅಧಿಕವಾಗಿದ್ದರೆ, ಈಜಿಪ್ಟ್ ಮತ್ತು ಕತಾರ್ನಲ್ಲಿ ಕ್ರಮವಾಗಿ ಶೇ.131 ಮತ್ತು ಶೇ.361ರಷ್ಟು ಹೆಚ್ಚಳವಾಗಿದೆ. ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ ಮತ್ತು ಚೀನಾ - ಇವು ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಟಾಪ್ 5 ದೇಶಗಳು. ಭಾರತದ ಆಮದು ಗಾತ್ರ ತಗ್ಗಿರುವುದರಿಂದಾಗಿ ರಷ್ಯಾಕ್ಕೆ ಹೆಚ್ಚು ಆದಾಯ ನಷ್ಟವಾಗಿದೆ. ಅದೇ ವೇಳೆ, ಅಮೆರಿಕದಿಂದ ಭಾರತ ತರಿಸುವ ಸಾಮಗ್ರಿಗಳಲ್ಲಿಯೂ ಶೇ.46ರಷ್ಟು ಕುಸಿತ ಆಗಿದೆ.
ರಕ್ಷಣಾ ಸಾಮಗ್ರಿಗಳ ವಿಷಯದಲ್ಲಿ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಸ್ವದೇಶಿ ನಿರ್ವಣಕ್ಕೆ ಒತ್ತು ಇವುಗಳ ಜತೆಗೆ ಖರೀದಿಯಲ್ಲಿನ ಕ್ಲಿಷ್ಟ, ಸಂಕೀರ್ಣ ಪ್ರಕ್ರಿಯೆಗಳು ಕೂಡ ಭಾರತದ ಆಮದು ಪ್ರಮಾಣ ತಗ್ಗುವುದಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಸ್ಟಾಕ್ಹೋಮ್ ವರದಿ ತಿಳಿಸಿದೆ. ಭಾರತ ಸರ್ಕಾರ ಕಳೆದ ವರ್ಷ 101 ರಕ್ಷಣಾ ವಸ್ತುಗಳ ನೆಗೆಟಿವ್ ಇಂಪೋರ್ಟ್ ಯಾದಿಯನ್ನು ಪ್ರಕಟಿಸಿದೆ. ಅಂದರೆ ಆ ವಸ್ತುಗಳನ್ನು ವಿದೇಶದಿಂದ ತರುವಂತಿಲ್ಲ. ಇದರ ಜತೆಗೆ, ಸೇನೆಯ ಬಂಡವಾಳ ವೆಚ್ಚದಲ್ಲಿನ ಶೇ.60 ಭಾಗವನ್ನು, ಅಂದರೆ, 70,221 ಕೋಟಿ ರೂ.ಗಳನ್ನು ಸ್ವದೇಶಿ ಸಾಮಗ್ರಿ ತಯಾರಿಕೆಗೆ ಮೀಸಲಿಡಲಾಗಿದೆ. ಇದರಿಂದ ರಕ್ಷಣಾ ಉಪಕರಣಗಳನ್ನು ದೇಶೀಯವಾಗಿಯೇ ಉತ್ಪಾದಿಸಲು ಉತ್ತೇಜನ ದೊರೆಯಲಿದೆ. ಸ್ವದೇಶಿ ಉತ್ಪಾದನೆಗೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಕ್ಷಣಾ ಸಾಮಗ್ರಿ ಸ್ವಾಧೀನ ಪ್ರಕ್ರಿಯೆ-2020 ಮತ್ತು ಇತರ ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದಲ್ಲದೆ, ವಿದೇಶದಿಂದ ಯಾವ್ಯಾವ ವಸ್ತುಗಳನ್ನು ತರಿಸಬಾರದು ಎಂಬ ಎರಡನೆಯ ಯಾದಿಯನ್ನು ಶೀಘ್ರ ಬಿಡುಗಡೆ ಮಾಡಲಿದೆ. ತೇಜಸ್ ಯುದ್ಧ ವಿಮಾನ ಮತ್ತು ಅರ್ಜುನ ಟ್ಯಾಂಕ್ ಮುಂತಾದವುಗಳ ದೇಶಿಯ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ರಕ್ಷಣಾ ಉದ್ದೇಶಕ್ಕೆ ವಿಪರೀತ ಎನಿಸುವಷ್ಟು ವ್ಯಯಿಸುವುದು ಯಾವುದೇ ದೇಶಕ್ಕಾದರೂ ಹೊರೆ ಎನಿಸಬಹುದಾದರೂ, ಸದ್ಯ ಭಾರತ ಇರುವಂತಹ ಸನ್ನಿವೇಶದಲ್ಲಿ ಇದು ಅನಿವಾರ್ಯ ಕೂಡಾ. ಚೀನಾ ಮತ್ತು ಪಾಕಿಸ್ತಾನದಂತಹ ನೆರೆದೇಶಗಳ ಉಪಟಳವನ್ನು ಸಮರ್ಥವಾಗಿ ಎದುರಿಸಲು ಭಾರತ ಸದಾ ಸನ್ನದ್ಧವಾಗಿ ಇರಬೇಕಾಗುತ್ತದೆ. ಪಾಕಿಸ್ತಾನವು ನಿರಂತರವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತದೆ. ಇನ್ನು, ಚೀನಾವಂತೂ ಗಡಿ ವಿಷಯದಲ್ಲಿ ತಂಟೆ ತೆಗೆಯುತ್ತ ಭಾರತಕ್ಕೆ ತಲೆನೋವು ತರುತ್ತಿರುತ್ತದೆ. ಹೀಗಾಗಿ, ಭಾರತ ತನ್ನ ರಕ್ಷಣೆಗೆ ಅಗತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ದೇಶೀಯ ಉತ್ಪಾದನೆಗೆ ಹೆಚ್ಚು ಗಮನ ನೀಡುವ ಮೂಲಕ, ರಕ್ಷಣಾ ವೆಚ್ಚಕ್ಕಾಗಿ ಆಗುವ ಆರ್ಥಿಕ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು. ಈ ದಿಕ್ಕಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಗೋಚರಿಸುತ್ತಿದೆ.