ನ್ಯೂಸ್

ವಿಶ್ವದ ಮೊದಲ ಹಾಗೂ ತನ್ನದೇಯಾದ ಕರೊನಾ ಮೂಗಿನ ಲಸಿಕೆ ಬಿಡುಗಡೆ ಮಾಡಿದ ಭಾರತ: 1 ಡೋಸ್​ಗೆ 800 ರೂ.

ನವದೆಹಲಿ: ಭಾರತದ "ಭಾರತ್ ಬಯೋಟೆಕ್​" ಕಂಪನಿ ತಯಾರಿಸಿರುವ ವಿಶ್ವದ ಮೊದಲ ಕೋವಿಡ್​ 19 ಮೂಗಿನ ಲಸಿಕೆ 'ಇನ್ ಕೋವ್ಯಾಕ್' ಅನ್ನು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಇಂದು (ಜ.26) ಬಿಡುಗಡೆ ಮಾಡಿದರು.

ಈ ಲಸಿಕೆಯು ಸರ್ಕಾರಕ್ಕೆ 300 ರೂ. ದರಗಳಲ್ಲಿ ದೊರೆತರೆ, ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ತಗುಲುತ್ತದೆ. ಭಾರತ್​ ಬಯೋಟೆಕ್​ ಕಂಪನಿಯು ಡಿಸೆಂಬರ್ 2022ರಲ್ಲಿ ಪ್ರಾಥಮಿಕ 2-ಡೋಸ್ ಮತ್ತು ಏಕರೂಪವಲ್ಲದ ಬೂಸ್ಟರ್ ಡೋಸ್‌ಗೆ ಅನುಮೋದನೆಯನ್ನು ಪಡೆದುಕೊಂಡಿತು. ಅದಕ್ಕೂ ಮೊದಲು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಸಂದರ್ಭಗಳಲ್ಲಿ ಇಂಟ್ರಾನಾಸಲ್ ಲಸಿಕೆಯ ನಿರ್ಬಂಧಿತ ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದಿಸಿತ್ತು.

28 ದಿನಗಳ ಅಂತರದಲ್ಲಿ ಎರಡು ಡೋಸ್​ ನಾಸಲ್​ ಅಥವಾ ಮೂಗಿನ ಲಸಿಕೆಯನ್ನು ನೀಡಲಾಗುತ್ತದೆ. ಮುನ್ನೆಚ್ಚರಿಕೆ ಅಥವಾ ಬೂಸ್ಟರ್ ಡೋಸ್ ತೆಗೆದುಕೊಂಡವರಿಗೆ ಮೂಗಿನ ಲಸಿಕೆಯನ್ನು ನೀಡಲಾಗುವುದಿಲ್ಲ ಎಂದು ದೇಶದ ಲಸಿಕೆ ಕಾರ್ಯಪಡೆಯ ಮುಖ್ಯಸ್ಥರು ಕಳೆದ ತಿಂಗಳು ತಿಳಿಸಿದ್ದರು. ಇಂಟ್ರಾನಾಸಲ್​ ಅಥವಾ ಮೂಗಿನ ಲಸಿಕೆ ಬೇಕಾದಲ್ಲಿ ಕೋವಿನ್​ ವೆಬ್​ಸೈಟ್​ಗೆ ಭೇಟಿ ನೀಡಿ ಅಪಾಯಿಂಟ್​ಮೆಂಟ್​ ಬುಕ್​ ಮಾಡಬಹುದು ಎಂದು ಭಾರತ್​ ಬಯೋಟೆಕ್​ ಹೇಳಿದೆ.

ಇನೋವ್ಯಾಕ್​ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ, ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಪರಿಣಾಮಕಾರಿತ್ವಕ್ಕಾಗಿ ಪೂರ್ವಭಾವಿ ಅಧ್ಯಯನಗಳಲ್ಲಿ ಮೌಲ್ಯಮಾಪನ ಮಾಡಿದೆ. ಮಾನವ ಕ್ಲಿನಿಕಲ್ ಪ್ರಯೋಗಗಳು ಸೇರಿದಂತೆ ಪೂರ್ವಭಾವಿ ಸುರಕ್ಷತಾ ಮೌಲ್ಯಮಾಪನಕ್ಕೆ ಸಂಬಂಧಿಸಿದ ಉತ್ಪನ್ನ ಅಭಿವೃದ್ಧಿ, ಬೃಹತ್-ಪ್ರಮಾಣದ ಉತ್ಪಾದನಾ, ಸೂತ್ರೀಕರಣ ಮತ್ತು ವಿತರಣಾ ಸಾಧನ ಅಭಿವೃದ್ಧಿಯನ್ನು ಭಾರತ್ ಬಯೋಟೆಕ್ ನಡೆಸಿದೆ. (ಏಜೆನ್ಸೀಸ್​)