ನ್ಯೂಸ್

ಭಾರತ ಉದ್ವಿಗ್ನತೆ ಹೆಚ್ಚಿಸಲು ಬಯಸುವುದಿಲ್ಲ; ಮಿಲಿಟರಿ ದಾಳಿಗೆ ತಕ್ಕ ಉತ್ತರ ನೀಡಲಾಗುವುದು; ಎಸ್.ಜೈಶಂಕರ್| jaishankar

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಅನಾಗರಿಕ ದಾಳಿಯು ಭಾರತವನ್ನು 'ಗಡಿಯಾಚೆಗಿನ' ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸುವಂತೆ ಒತ್ತಾಯಿಸಿತು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಪಾಕಿಸ್ತಾನದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಉದ್ದೇಶ ಭಾರತಕ್ಕೆ ಇಲ್ಲ. ಆದರೆ, ದೇಶದ ಮೇಲೆ ಪಾಕ್‌ನಿಂದ ಯಾವುದೇ ರೀತಿಯ ಮಿಲಿಟರಿ ದಾಳಿಗಳು ನಡೆದರೆ, ಅದಕ್ಕೆ ತಕ್ಕ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ (8) ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗಿನ ಸಭೆಯಲ್ಲಿ ಜೈಶಂಕರ್ ಮಾತನಾಡಿದ್ದು, ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದು ನಮ್ಮ ಉದ್ದೇಶವಲ್ಲ. ಆದಾಗ್ಯೂ, ನಮ್ಮ ಮೇಲೆ ಮಿಲಿಟರಿ ದಾಳಿಗಳು ನಡೆದರೆ, ಅದಕ್ಕೆ ಅತ್ಯಂತ ದೃಢವಾದ ಪ್ರತಿಕ್ರಿಯೆ ನೀಡಲಾಗುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಗುಡುಗಿದ್ದಾರೆ.

ಇರಾನಿನ ನಿಯೋಗವನ್ನು ಸ್ವಾಗತಿಸುತ್ತಾ ಮತ್ತು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಎತ್ತಿ ತೋರಿಸುತ್ತಾ, ರಾಷ್ಟ್ರೀಯ ಭದ್ರತಾ ಕಾಳಜಿಗಳು ಅತ್ಯುನ್ನತವೆಂದು ಜೈಶಂಕರ್ ಸ್ಪಷ್ಟಪಡಿಸಿದರು. ನೆರೆಯ ಮತ್ತು ಆಪ್ತ ಪಾಲುದಾರರಾಗಿ, ಈ ಪರಿಸ್ಥಿತಿಯ ಬಗ್ಗೆ ನಿಮಗೆ ಉತ್ತಮ ತಿಳುವಳಿಕೆ ಇರುವುದು ಮುಖ್ಯ ಎಂದು ಅವರು ಹೇಳಿದರು.

ಭಾರತದ ಆಪರೇಷನ್ ಸಿಂದೂರ್‌ಗೆ ಪ್ರತಿಕ್ರಿಯೆಯಾಗಿ ಪ್ರತೀಕಾರ ತೀರಿಸಿಕೊಳ್ಳಲು ದೇಶದ ಸಶಸ್ತ್ರ ಪಡೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿ ಘೋಷಿಸಿದ ಬಳಿಕ ಪಾಕಿಸ್ತಾನಕ್ಕೆ ಜೈಶಂಕರ್ ಎಚ್ಚರಿಕೆ ನೀಡಿದರು.

(ಏಜೆನ್ಸೀಸ್)