ನ್ಯೂಸ್

Afghanistan Earthquake | ಅಫ್ಘಾನಿಸ್ತಾನದಲ್ಲಿ ಭೂಕಂಪ; ಸಂತ್ರಸ್ತರ ನೆರವಿಗೆ ಧಾವಿಸಿದ ಭಾರತ ಸರ್ಕಾರ, 21 ಟನ್ ಪರಿಹಾರ ಸಾಮಗ್ರಿ ರವಾನೆ

Afghanistan Earthquake: ಭೂಕಂಪ ಪೀಡಿತ ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ಬುಧವಾರ (ಸೆಪ್ಟೆಂಬರ್​​ 3) 21 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ. ಭಾನುವಾರ ತಡರಾತ್ರಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.0 ತೀವ್ರತೆಯ ಭೂಕಂಪದ ನಂತರ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಎಕ್ಸ್​​​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಾರತದ ಭೂಕಂಪದ ನೆರವನ್ನು ಕಾಬೂಲ್‌ಗೆ ವಿಮಾನದ ಮೂಲಕ ತಲುಪಿಸಲಾಗುತ್ತದೆ ಎಂದಿದ್ದಾರೆ. ಭಾರತವು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾನವೀಯ ನೆರವನ್ನು ಸಹ ನೀಡಲಾಗುವುದು ಎಂದರು.

ಭಾರತ ಸರ್ಕಾರದಂತೆ ಅನೇಕ ರಾಷ್ಟ್ರಗಳು ಸಹಾಯವನ್ನು ಘೋಷಿಸಿದ್ದು, ಅದರಲ್ಲಿ ಒಂದು ಭಾಗವನ್ನು ಈಗಾಗಲೇ ತುರ್ತು ಪರಿಹಾರ ಸಮಿತಿಗಳಿಗೆ ಸಂತ್ರಸ್ತರಿಗೆ ವಿತರಿಸಲು ತಲುಪಿಸಲಾಗಿದೆ ಎಂದು ತಾಲಿಬಾನ್ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪದಿಂದ ಹಾನಿಗೊಳಗಾದವರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದರು.

ಸಾಮಗ್ರಿಗಳು ಏನೇನು..?

ಕಂಬಳಿಗಳು, ಡೇರೆಗಳು, ನೈರ್ಮಲ್ಯ ಕಿಟ್‌ಗಳು, ನೀರು ಸಂಗ್ರಹ ಟ್ಯಾಂಕ್‌ಗಳು, ಜನರೇಟರ್‌ಗಳು, ಅಡುಗೆ ಪಾತ್ರೆಗಳು, ಪೋರ್ಟಬಲ್ ವಾಟರ್ ಪ್ಯೂರಿಫೈಯರ್‌ಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಅಗತ್ಯ ಔಷಧಿಗಳು, ವೀಲ್‌ಚೇರ್‌ಗಳು, ಹ್ಯಾಂಡ್ ಸ್ಯಾನಿಟೈಸರ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು ಮತ್ತು ವೈದ್ಯಕೀಯ ವಸ್ತುಗಳು.(ಏಜೆನ್ಸೀಸ್​​)