ನವದೆಹಲಿ: ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿ ಕರೊನಾ ಪ್ರಕರಣದ ಸರಾಸರಿ ಸಂಖ್ಯೆ ಕಡಿಮೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಗುಣಮುಖ ಪ್ರಮಾಣವೂ ಶೇ. 56ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಒಂದು ಲಕ್ಷ ಜನರಲ್ಲಿ 30.04 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ವಿಶ್ವದಲ್ಲಿ ಲಕ್ಷಕ್ಕೆ 114.67 ಜನರಿಗೆ ಸೋಂಕು ತಗುಲಿದೆ. ಅಮೆರಿಕದಲ್ಲಿ ಲಕ್ಷಕ್ಕೆ 671.24 ಜನರು ಸೋಂಕಿಗೆ ತುತ್ತಾಗಿದ್ದಾರೆ. ಜರ್ಮನಿ, ಸ್ಪೇನ್, ಬ್ರೆಜಿಲ್ ಮತ್ತು ಬ್ರಿಟನ್ನಲ್ಲೂ ಸಹ ಈ ಪ್ರಮಾಣ 450ಕ್ಕೂ ಹೆಚ್ಚಿದೆ. ರಷ್ಯಾದಲ್ಲಿ ಲಕ್ಷಕ್ಕೆ 400, ಇರಾನ್ನಲ್ಲಿ 394 ಜನರು ಸೋಂಕಿತರಾಗುತ್ತಿದ್ದಾರೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂಜಾಗ್ರತೆ ಕ್ರಮದಿಂದಾಗಿ ಸೋಂಕು ನಿಯಂತ್ರಣದಲ್ಲಿದೆ ಸಚಿವಾಲಯ ತಿಳಿಸಿದೆ.
ಶೇ. 55.7 ಸೋಂಕಿತರು ಗುಣಮುಖ: ಸದ್ಯ ದೇಶದಲ್ಲಿ 2.44 ಲಕ್ಷಕ್ಕೂ ಹೆಚ್ಚು ಸೋಂಕಿನಿಂದ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ 55.77ರಷ್ಟಿದೆ. ಪರೀಕ್ಷಾ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡುಬರುತ್ತಿದೆ. ಸರ್ಕಾರಿ ಪರೀಕ್ಷಾಲಯಗಳ ಸಂಖ್ಯೆ 723ಕ್ಕೆ ಏರಿದ್ದು, 262 ಖಾಸಗಿ ಪರೀಕ್ಷಾಲಯಗಳಲ್ಲೂ ಪರೀಕ್ಷೆ ನಡೆಸಲಾಗುತ್ತಿದೆ. ಇದುವರೆಗೆ ದೇಶದಲ್ಲಿ 69.5 ಲಕ್ಷ ಜನರಿಗೆ ಕರೊನಾ ಪರೀಕ್ಷೆ ನಡೆಸಲಾಗಿದೆ. ಪ್ರತಿದಿನ 1.4 ಲಕ್ಷಕ್ಕೂ ಹೆಚ್ಚು ಜನರ ಪರೀಕ್ಷೆಯಾಗುತ್ತಿದೆ.
ದೆಹಲಿಯ ಸಾವಿನ ವರದಿ ಕೇಳಿದ ಕೇಂದ್ರ: ರಾಷ್ಟ್ರ ರಾಜಧಾನಿಯಲ್ಲಿ ಕರೊನಾದಿಂದಾಗಿ ಸಾವನ್ನಪ್ಪಿರುವ ಪ್ರತಿ ಸೋಂಕಿತನ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೇಜ್ರಿವಾಲ್ ಸರ್ಕಾರಕ್ಕೆ ಸೂಚಿಸಿದೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೆರಾಲಾಜಿಕಲ್ ಸಮೀಕ್ಷೆ ಮಾಡಲು ಕೇಂದ್ರ ಮುಂದಾಗಿದೆ.
ವಿಶ್ವದಲ್ಲಿ ದಾಖಲೆ: ವಿಶ್ವದಲ್ಲಿ ಕರೊನಾ ಸಂಖ್ಯೆ ಭಾನುವಾರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯ ಪ್ರಕಾರ 24 ಗಂಟೆಗಳಲ್ಲಿ 1,83,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್ನಲ್ಲಿ 54,771 ಪ್ರಕರಣಗಳು ಪತ್ತೆಯಾಗಿದ್ದು ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. 36,617 ಪ್ರಕರಣಗಳೊಂದಿಗೆ ಅಮೆರಿಕ ಎರಡನೇ ಸ್ಥಾನ ಮತ್ತು 15,400 ಪ್ರಕರಣಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ.
ಸ್ಪೇನ್ ತುರ್ತು ಪರಿಸ್ಥಿತಿ ತೆರವು: ಕರೊನಾ ದಾಳಿಗೆ ತುತ್ತಾಗಿದ್ದ ಸ್ಪೇನ್ ಇದೀಗ ದೇಶದಲ್ಲಿದ್ದ ತುರ್ತು ಪರಿಸ್ಥಿತಿ ತೆಗೆದುಹಾಕಿದೆ. ಬ್ರಿಟನ್ ಮತ್ತು 26 ಯುರೋಪಿಯನ್ ದೇಶಗಳಿಂದ ಬರುವ ಜನರಿಗೆ 14 ದಿನಗಳ ಕ್ವಾರಂಟೈನ್ನನ್ನೂ ತೆಗೆದುಹಾಕಲಾಗಿದೆ.
04