ನ್ಯೂಸ್

ಲಿಪುಲೇಖ್ ಪಾಸ್ ಮೂಲಕ ಭಾರತ-ಚೀನಾ ವ್ಯಾಪಾರ: ನೇಪಾಳದ ಬಳಿ ಯಾವುದೇ ಪುರಾವೆಗಳಿಲ್ಲ ಎಂದ ಭಾರತ| MEA

MEA: ಪುಲೆಖ್ ಪಾಸ್ ಮೂಲಕ ಭಾರತ-ಚೀನಾ ವ್ಯಾಪಾರವನ್ನು ಪುನರಾರಂಭಿಸುವುದಕ್ಕೆ ನೇಪಾಳದ ಆಕ್ಷೇಪಣೆಯನ್ನು ಕೇಂದ್ರವು ತಿರಸ್ಕರಿಸಿದೆ. ಅಲ್ಲದೆ, ವ್ಯಾಪಾರ ಮಾರ್ಗದ ಮೇಲೆ ಕಠ್ಮಂಡುವಿನ ಪ್ರಾದೇಶಿಕ ಹಕ್ಕ ಅಸಮರ್ಥನೀಯ ಮತ್ತು ಯಾವುದೇ ಪುರಾವೆಗಳನ್ನು ಆಧರಿಸಿಲ್ಲ ಎಂದು ಬುಧವಾರ (ಆಗಸ್ಟ್​ 20) ಭಾರತ ತಿಳಿಸಿದೆ.

ಲಿಪುಲೆಖ್ ಮೂಲಕ ವ್ಯಾಪಾರ ಮಾರ್ಗವನ್ನು ತೆರೆಯುವ ಭಾರತ ಮತ್ತು ಚೀನಾ ನಡುವಿನ ಒಪ್ಪಂದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿದ ನಂತರ, ಈ ಭೂಮಿಯ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಿತು.

ನೇಪಾಳದ ಹಕ್ಕು ಯಾವುದೇ ಐತಿಹಾಸಿಕ ಸಂಗತಿಗಳನ್ನು ಆಧರಿಸಿಲ್ಲ: MEA

ನೇಪಾಳ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರವು 1954 ರಲ್ಲಿ ಪ್ರಾರಂಭವಾಯಿತು. ಇದು ದಶಕಗಳಿಂದ ನಡೆಯುತ್ತಿದೆ. ಕೋವಿಡ್ ಮತ್ತು ಇತರ ಬೆಳವಣಿಗೆಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಈ ವ್ಯಾಪಾರವು ಅಡ್ಡಿಪಡಿಸಲ್ಪಟ್ಟಿತ್ತು ಮತ್ತು ಈಗ ಭಾರತ ಮತ್ತು ಚೀನಾ ವ್ಯಾಪಾರವನ್ನು ಪುನರಾರಂಭಿಸಲು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.

ಅಲ್ಲದೆ, ಪ್ರಾದೇಶಿಕ ಹಕ್ಕುಗಳಿಗೆ ಸಂಬಂಧಿಸಿದಂತೆ, ನೇಪಾಳದ ಹಕ್ಕುಗಳು ಸಮರ್ಥನೀಯವಲ್ಲ, ಐತಿಹಾಸಿಕ ಸಂಗತಿಗಳು ಮತ್ತು ಪುರಾವೆಗಳನ್ನು ಆಧರಿಸಿಲ್ಲ ಎಂಬುದು ನಮ್ಮ ನಿಲುವು. ಪ್ರಾದೇಶಿಕ ಹಕ್ಕುಗಳ ಯಾವುದೇ ಏಕಪಕ್ಷೀಯವಾಗಿ ನಿರ್ಧಾರಿಸುವುದು ಸಮರ್ಥನೀಯವಲ್ಲ ಎಂದು ಜೈಸ್ವಾಲ್​ ಸ್ಪಷ್ಟಪಡಿಸಿದ್ದಾರೆ. ನೇಪಾಳದೊಂದಿಗೆ ಮಾತುಕತೆ ಮೂಲಕ ಬಾಕಿ ಇರುವ ಗಡಿ ಸಮಸ್ಯೆಗಳನ್ನು ಪರಿಹರಿಸುವ ಕುರಿತು ರಚನಾತ್ಮಕ ಸಂವಹನಕ್ಕೆ ಭಾರತ ಮುಕ್ತವಾಗಿದೆ ಎಂದು ಜೈಸ್ವಾಲ್​ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಸಚಿವ ಎಸ್. ಜೈಶಂಕರ್, NSA ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವ್ಯಾಪಕ ಮಾತುಕತೆಯ ನಂತರ ಮಂಗಳವಾರ ಬಿಡುಗಡೆಯಾದ ಜಂಟಿ ದಾಖಲೆಯಲ್ಲಿ, ಲಿಪುಲೇಖ್ ಪಾಸ್, ಶಿಪ್ಕಿ ಲಾ ಪಾಸ್ ಮತ್ತು ನಾಥು ಲಾ ಪಾಸ್ ಎಂಬ ಮೂರು ಕೇಂದ್ರಗಳ ಮೂಲಕ ಗಡಿ ವ್ಯಾಪಾರವನ್ನು ಪುನಃ ತೆರೆಯಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

ನೇಪಾಳ ಹೇಳಿದ್ದೇನು?

ಲಿಪುಲೆಖ್ ಪಾಸ್ ಮೂಲಕ ಗಡಿ ವ್ಯಾಪಾರವನ್ನು ಪುನರಾರಂಭಿಸುವ ಕ್ರಮಕ್ಕೆ ನೇಪಾಳದ ವಿದೇಶಾಂಗ ಸಚಿವಾಲಯ ಬುಧವಾರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪ್ರದೇಶವು ನೇಪಾಳದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದೆ.

ಮಹಾಕಾಳಿ ನದಿಯ ಪೂರ್ವದಲ್ಲಿರುವ ಲಿಂಪಿಯಾಧುರ, ಲಿಪುಲೇಖ್ ಮತ್ತು ಕಲಾಪಾಣಿ ನೇಪಾಳದ ಅವಿಭಾಜ್ಯ ಅಂಗಗಳಾಗಿವೆ ಎಂದು ನೇಪಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಪ್ರದೇಶಗಳನ್ನು ಅಧಿಕೃತವಾಗಿ ನೇಪಾಳದ ನಕ್ಷೆಯಲ್ಲಿ ಸೇರಿಸಲಾಗಿದೆ, ಇದನ್ನು ಸಂವಿಧಾನದಲ್ಲಿಯೂ ಸೇರಿಸಲಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ತಿಳಿಸಿದೆ.

ನೇಪಾಳವು ಐದು ಭಾರತೀಯ ರಾಜ್ಯಗಳಾದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳೊಂದಿಗೆ 1,850 ಕಿ.ಮೀ.ಗೂ ಹೆಚ್ಚು ಗಡಿಯನ್ನು ಹಂಚಿಕೊಂಡಿದೆ.(ಏಜೆನ್ಸೀಸ್)