ನವದೆಹಲಿ: ಪೂರ್ವ ಲಡಾಖ್ನ ದಕ್ಷಿಣ ಪ್ಯಾಂಗಾಂಗ್ ತ್ಸೊ ಪ್ರದೇಶದಲ್ಲಿ ಚೀನಾ ಭಾರಿ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಿ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.
ಟ್ಯಾಂಕ್ಗಳು ಮತ್ತು ಪದಾತಿ ದಳ ಸೈನಿಕರನ್ನು ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಿದೆ. ದಕ್ಷಿಣ ಪ್ಯಾಂಗಾಂಗ್ನ ಮಾಲ್ಡೊದಿಂದ ಅನತಿ ದೂರದಲ್ಲಿ ಹೆಚ್ಚುವರಿ ಟ್ಯಾಂಕ್ ಪಡೆಗಳು ಇರುವುದು ಕಂಡುಬಂದಿದೆ. ಚೀನಾದ ಭಾರಿ ಶಸ್ತ್ರಾಸ್ತ್ರ ಸಾಗಾಟ ಚಟುವಟಿಕೆಗಳನ್ನು ಥಾಕುಯಂಗ್ನಿಂದ ಮುಕ್ಪಾರಿ ವರೆಗೆ ಎತ್ತರದ ದಿಣ್ಣೆಗಳ ಮೇಲೆ ಹಿಡಿತ ಸಾಧಿಸಿರುವ ಭಾರತೀಯ ಸೇನೆ ಈಗಾಗಲೇ ಗಮನಿಸಿದೆ. ವಾಸ್ತವ ಗಡಿ ರೇಖೆಯಲ್ಲಿ (ಎಲ್ಎಸಿ) ಭದ್ರತೆಗಾಗಿ ಭಾರತದ ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.
ಎತ್ತರದ ದಿಣ್ಣೆಗಳ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಭಾರತದ ಸೇನೆಗೆ ಚೀನಾವನ್ನು ಎದುರಿಸುವುದು ಸುಲಭವಾಗಲಿದೆ. ಪೂರ್ವ ಲಡಾಖ್ನ ಎತ್ತರದ ಪರ್ವತ ಪ್ರದೇಶಗಳಲ್ಲಿ ಟಿ-90 ಸಮರ ಟ್ಯಾಂಕ್ಗಳು, ಉನ್ನತೀಕರಿಸಿದ ಟಿ-72ಎಂ1 ಟ್ಯಾಂಕ್ಗಳನ್ನು ಭಾರತ ಸಜ್ಜುಗೊಳಿಸಿದೆ.
ವೈಮಾನಿಕ ಚಟುವಟಿಕೆ: ಟಿಬೆಟ್ನಲ್ಲಿರುವ ವಾಯುನೆಲೆಗಳಿಂದ ಚೀನಾ ಎಲ್ಎಸಿಯಲ್ಲಿ ಚಟುವಟಿಕೆ ಹೆಚ್ಚಿಸಿದೆ. ಸುಖೋಯ್ 30 ಯುದ್ಧ ವಿಮಾನಗಳನ್ನು ಅದು ಹೆಚ್ಚಾಗಿ ಬಳಸುತ್ತಿದೆ. ಸುಖೋಯ್ ಭಾರತದ ವಾಯುಪಡೆಯ ಪ್ರಮುಖ ಅಸ್ತ್ರವಾಗಿದೆ ಎನ್ನುವುದು ಗಮನಾರ್ಹ. ಉತ್ತರ ಭಾರತದಲ್ಲಿರುವ ವಾಯು ನೆಲೆಗಳಿಂದ ವಿಮಾನಗಳ ಯುದ್ಧ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ದೇಶದ ಈಶಾನ್ಯ ಭಾಗದಲ್ಲಿರುವ ವಾಯುನೆಲೆಗಳಿಗೆ ಐಎಎಫ್ ಮುಖ್ಯಸ್ಥ ಆರ್.ಕೆ.ಎಸ್. ಬಧೌರಿಯಾ ಗುರುವಾರ ಭೇಟಿ ನೀಡಿ ಸನ್ನದ್ಧತೆ ಪರಿಶೀಲಿಸಿದ್ದರು.
ಗಡಿಯಲ್ಲಿ ಮೂಲಸೌಕರ್ಯ
ಟಿಬೆಟ್ನಲ್ಲಿ ರೈಲು ಮಾರ್ಗ ಮುಂತಾದ ಪ್ರಮುಖ ಮೂಲಸೌಕರ್ಯ ಯೋಜನೆ ಗಳನ್ನು ಅನುಷ್ಠಾನಗೊಳಿಸಲು 10,69,203 ಕೋಟಿ ರೂಪಾಯಿ ಹೂಡಿಕೆ ಮಾಡಲು ಚೀನಾ ನಿರ್ಧರಿಸಿದೆ. ಇದು ಭಾರತದ ವಿರುದ್ಧ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಲಾಗಿದೆ. ಭಾರತದೊಂದಿಗಿನ ಗಡಿ ಉದ್ವಿಗ್ನತೆ ನಡುವೆಯೇ ಗಡಿ ಭದ್ರತೆ ಬಲಗೊಳಿಸುವುದು ಚೀನಾದ ಉದ್ದೇಶವಾಗಿದೆ.
ಚೀನಾಕ್ಕೆ ರಾಜನಾಥ್ ಖಡಕ್ ಸಂದೇಶ
ಮಾಸ್ಕೋ: ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಓ) ಸದಸ್ಯ ದೇಶ ಗಳಲ್ಲಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಇರಬೇಕಾದರೆ ಪರಸ್ಪರರ ನಡುವೆ ವಿಶ್ವಾಸ ಇರುವುದು ಮುಖ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಚೀನಾಕ್ಕೆ ಉದ್ದೇಶಿಸಿ ಅವರು ಈ ಸಂದೇಶ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಚೀನಾದ ರಕ್ಷಣಾ ಸಚಿವ ಜನರಲ್ ವೀ ಫೆಂಗೆ ಕೂಡ ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆಕ್ರಮಣ ಮಾಡದಿರುವುದು, ಅಂತಾರಾಷ್ಟ್ರೀಯ ನಿಯಮಗಳ ಪಾಲನೆ ಹಾಗೂ ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ವಾಗಿ ಬಗೆಹರಿಸಿ ಕೊಳ್ಳುವುದು ಅಗತ್ಯ ಎಂದು ಸಿಂಗ್ ಹೇಳಿದರು. ಭಾರತ - ಚೀನಾ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರು ಅಂಶ ಪ್ರಸ್ತಾಪಿಸಿದ್ದಾರೆ. ಎರಡನೇ ಮಹಾಯುದ್ಧದ ಭೀಕರತೆ ತಂದೊಡ್ಡಿದ ಅನಾಹುತವನ್ನು ನೆನಪಿಸಿದ ಸಿಂಗ್, ಒಂದು ದೇಶ ಇನ್ನೊಂದರ ಮೇಲೆ ನಡೆಸುವ ಆಕ್ರಮಣದಿಂದ ವಿನಾಶವಲ್ಲದೆ ಇನ್ನೇನೂ ಸಾಧನೆಯಾಗದು. ಭಾರತ ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ ಎಂದರು.
ಏನಿದು ಎಸ್ಸಿಓ?
ಇದು 8 ರಾಷ್ಟ್ರಗಳ ಒಕ್ಕೂಟವಾಗಿದೆ. ಚೀನಾ, ಕಜಕಿಸ್ತಾನ, ರ್ಕಿಗಿಸ್ತಾನ, ರಷ್ಯಾ, ತಜಕಿಸ್ತಾನ, ಉಜ್ಬೇಕಿಸ್ತಾನ, ಭಾರತ, ಪಾಕಿಸ್ತಾನ ಇದರ ಸದಸ್ಯ ರಾಷ್ಟ್ರಗಳು. ಜಗತ್ತಿನ ಶೇ. 40 ಜನಸಂಖ್ಯೆ ಎಸ್ಸಿಓ ಸದಸ್ಯ ರಾಷ್ಟ್ರಗಳಲ್ಲಿದೆ.
ಸುರಕ್ಷತೆಗೆ ಕ್ರಮ ನರವಾಣೆ
ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿ ರೇಖೆಯಲ್ಲಿ (ಎಲ್ಎಸಿ) ಪರಿಸ್ಥಿತಿ ‘ಸ್ವಲ್ಪ ಉದ್ವಿಗ್ನವಾಗಿದೆ’ ಎಂದು ಭೂ ಸೇನೆ ಮುಖ್ಯಸ್ಥ ಎಂ.ಎಂ. ನರವಾಣೆ ಶುಕ್ರವಾರ ಹೇಳಿದ್ದಾರೆ. ‘ನಮ್ಮ ಸುರಕ್ಷತೆ ಹಾಗೂ ಭದ್ರತೆಗಾಗಿ ಮುನ್ನೆಚ್ಚರಿಕೆಯಾಗಿ ಕೆಲವು ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ಶನಿವಾರ ಮತ್ತು ಸೋಮವಾರ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಚೀನಿ ಸೈನಿಕರು ಅತಿಕ್ರಮಣ ನಡೆಸಿದ್ದ ಹಿನ್ನೆಲೆಯಲ್ಲಿ ಭೂ ಸೇನೆ ಮುಖ್ಯಸ್ಥರು ಅಲ್ಲಿನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಗುರುವಾರ ಲೇಹ್ಗೆ ಭೇಟಿ ನೀಡಿದ್ದ ನರವಾಣೆ, ಅಲ್ಲಿ ಸೈನಿಕರೊಂದಿಗೆ ಮಾತನಾಡಿ ಪರಿಸ್ಥಿತಿಯ ವಿವರಣೆ ಪಡೆದಿದ್ದರು. ‘ಯಾವುದೇ ಪರಿಸ್ಥಿತಿ ಎದುರಿಸಲು ನಮ್ಮ ಯೋಧರು ಸಂಪೂರ್ಣ ಸನ್ನದ್ಧರಾಗಿದ್ದಾರೆ ಎಂದರು.