ನವದೆಹಲಿ: ವಾಸ್ತವ ಗಡಿ ರೇಖೆಯುದ್ದಕ್ಕೂ (ಎಲ್ಎಸಿ) ಬೀಡುಬಿಟ್ಟಿರುವ ಚೀನಾದ ಸೈನ್ಯ ಸಂಪೂರ್ಣವಾಗಿ ವಾಪಸಾಗಬೇಕು. ಶಾಂತಿಯನ್ನು ತ್ವರಿತವಾಗಿ ಮರಳಿ ಸ್ಥಾಪಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೆರೆ ದೇಶಕ್ಕೆ ಭಾರತ ಭಾನುವಾರ ತಾಕೀತು ಮಾಡಿದೆ.
90 ದಿನಗಳ ಹಿಂದೆ ಪೂರ್ವ ಲಡಾಖ್ನಲ್ಲಿ ಆರಂಭವಾದ ಗಡಿ ತಕರಾರನ್ನು ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಭಾನುವಾರ ನಡೆದ ಉಭಯ ದೇಶಗಳ ಮಿಲಿಟರಿ ಮಟ್ಟದ ಸಭೆಯಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ಮೂಲಗಳು ಹೇಳಿವೆ.
ಪ್ಯಾಂಗಾಂಗ್ ತ್ಸೊ ಸರೋವರದ ಫಿಂಗರ್ ಪ್ರದೇಶಗಳಿಂದ ಆದಷ್ಟು ಬೇಗ ಸೈನಿಕರನ್ನು ವಾಪಸ್ ಕರೆಸಿಕೊಳ್ಳಬೇಕು. ಸಂಘರ್ಷದ ಇನ್ನೂ ಇತರ ಕೆಲವು ಪ್ರದೇಶಗಳಿಂದಲೂ ಸೇನಾ ಹಿಂತೆಗೆತವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದೆ. ಎಲ್ಎಸಿ ಚೀನಾ ಭಾಗದ ಪ್ರದೇಶ ಮೋಲ್ಡೊದಲ್ಲಿ ನಡೆದ 5ನೇ ಸುತ್ತಿನ ಸಭೆಯಲ್ಲಿ ಪೂರ್ವ ಲಡಾಖ್ನಲ್ಲಿ ಯಥಾಸ್ಥಿತಿ ಮರಳಿಸಬೇಕು. ಶಾಂತಿಯನ್ನು ಮರಳಿಸಲು ಮಾಡಿಕೊಳ್ಳಲಾದ ಒಪ್ಪಂದಗಳನ್ನು ಚಾಚೂ ತಪ್ಪದಂತೆ ಪಾಲಿಸಬೇಕೆಂಬ ಸ್ಪಷ್ಟ ಸಂದೇಶವನ್ನು ಭಾರತ ರವಾನಿಸಿದೆ ಎನ್ನಲಾಗಿದೆ. ಭಾನುವಾರದ ಮಾತುಕತೆಯಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್ ನೆಲೆಯ 14ನೇ ಕೋಡ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ವಹಿಸಿದ್ದರು. ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ವಲಯದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಚೀನಿ ನಿಯೋಗದ ಮುಖಂಡರಾಗಿದ್ದರು.
ದೋವಲ್-ಯೀ ಚರ್ಚೆ: ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಿಂದ ಉಭಯ ದೇಶಗಳ ಸಂಬಂಧ ತೀವ್ರವಾಗಿ ಬಿಗಡಾಯಿಸಿದ ಕಾರಣ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜುಲೈ 5ರಂದು ದೂರವಾಣಿ ಚರ್ಚೆ ನಡೆಸಿದ್ದ ಬಳಿಕ ಜುಲೈ 6ರಿಂದ ಪಡೆಗಳನ್ನು ವಾಪಸ್ ಪಡೆಯುವ ಕಾರ್ಯ ಆರಂಭವಾಗಿತ್ತು. ಇದಕ್ಕೂ ಮೊದಲು ಉಭಯ ದೇಶಗಳ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳ ಮಧ್ಯೆ ಎರಡು ಭಾರಿ ಚರ್ಚೆ ನಡೆದಿತ್ತು. ಗಲ್ವಾನ್ ಕಣಿವೆ ಘರ್ಷಣೆ ಬಳಿಕ ವಿದೇಶಾಂಗ ಸಚಿವ ಎಸ್.ಜೈಶಂಕರ್ ಚೀನಾದ ವಾಂಗ್ ಯಿಗೆ ನೇರವಾಗಿ ಕರೆ ಮಾಡಿದ್ದರು.
ಮಾತಿಗೆ ತಪ್ಪಿದ ಡ್ರಾ್ಯಗನ್ ನಾಡು: ಗಡಿ ತಕರಾರಿನ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ನಡೆದ ಮಾತುಕತೆ ಪ್ರಕಾರ ಗಲ್ವಾನ್ ಕಣಿವೆ ಹಾಗೂ ಇತರ ಕೆಲವು ಸಂಘರ್ಷದ ಸ್ಥಳಗಳಿಂದ ಚೀನಿ ಮಿಲಿಟರಿ ಹಿಂದೆ ಸರಿದಿದೆ. ಆದರೆ ಭಾರತ ಆಗ್ರಹಿಸಿರುವಂತೆ ಪ್ಯಾಂಗಾಂಗ್ ತ್ಸೊದಲ್ಲಿನ ಫಿಂಗರ್ ಪ್ರದೇಶಗಳಿಂದ ಹಿಂದೆ ಸರಿಯುವಲ್ಲಿ ಪ್ರಗತಿಯಾಗಿಲ್ಲ ಎಂದು ಮೂಲಗಳು ಹೇಳಿವೆ. ಪರ್ವತದ ಚಾಚು ಪ್ರದೇಶವನ್ನು ಫಿಂಗರ್ ಎಂದು ಕರೆಯಲಾಗುತ್ತದೆ.
ಸನ್ನದ್ಧತೆ: ಚೀನಾದ ಇಬ್ಬಗೆಯ ನೀತಿಯ ಹಿನ್ನೆಲೆಯಲ್ಲಿ ಗಡಿಯಲ್ಲಿನ ಯಾವುದೇ ಸವಾಲನ್ನು ಎದುರಿಸಲು ಭಾರತ ಸಂಪೂರ್ಣ ಸಜ್ಜಾಗಿದೆ.