ನ್ಯೂಸ್

ಜೂನ್​ 04 ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಖಚಿತ! ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತಹಾಕಿ, ರಾಹುಲ್ ಮನವಿ

ನವದೆಹಲಿ: ಏಳು ಹಂತದ ಲೋಕಸಭೆ ಚುನಾವಣೆಯ ನಾಲ್ಕನೇ ಸುತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮತ್ತು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲು ಸಹಾಯ ಮಾಡುವಂತೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಜನರಲ್ಲಿ ಮನವಿ ಮಾಡಿದರು.

ಈ ಕುರಿತು ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟರ್​) ಸಹ ಪೋಸ್ಟ್​ ಮಾಡಿದ ರಾಹುಲ್ ಗಾಂಧಿ, ಮತದಾರರು ವಿಚಲಿತರಾಗಬೇಡಿ ಮತ್ತು ಇತರರ ಮಾತುಗಳಿಗೆ ಕಿವಿಗೊಡಬೇಡಿ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಗೆ ನಿಮ್ಮ ಮತ ಹೆಚ್ಚಿನ ಸಂಖ್ಯೆಯಲ್ಲಿ ಬೇಕಿದೆ. ದಯವಿಟ್ಟು ಎಲ್ಲರೂ ತಪ್ಪದೇ ಮತಚಲಾಯಿಸಿ ಎಂದು ಮತದಾರರಿಗೆ ತಿಳಿಸಿದ್ದಾರೆ.

"ಇಂದು ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಮೊದಲ ಮೂರು ಹಂತಗಳ ವೋಟಿಂಗ್ ಪ್ರಕ್ರಿಯೆ ಈಗಾಗಲೇ ಮುಗಿದ ಬಳಿಕ ನಮಗೆ ತಿಳಿದದ್ದು, ಜೂನ್ 04ರಂದು ಇಂಡಿಯಾ ಮೈತ್ರಿಕೂಟ ಖಚಿತವಾಗಿ ಕೇಂದ್ರದಲ್ಲಿ ಸರ್ಕಾರ ನಿರ್ಮಿಸಲಿದೆ ಎಂದು. ನಿಮ್ಮ ಒಂದು ವೋಟ್ ನಿಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಮಾತ್ರ ರಕ್ಷಿಸುವುದಿಲ್ಲ, ಬದಲಿಗೆ ನಿಮ್ಮ ಕುಟುಂಬದ ಹಣೆಬರಹವನ್ನು ಸಹ ಬದಲಿಸಲಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).