Pakistan Products: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. 26 ಅಮಾಯಕರನ್ನು ಬಲಿಪಡೆದ ಉಗ್ರರನ್ನು ಸದೆಬಡಿಯಲು ಕಾದಿರುವ ಭಾರತ, ಇದೀಗ ಪಾಕ್ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಇದನ್ನೂ ಓದಿ: ಗೋವಾ ದೇಗುಲದಲ್ಲಿ ಕಾಲ್ತುಳಿತ! 6 ಭಕ್ತಾಧಿಗಳು ದುರ್ಮರಣ, 30ಕ್ಕೂ ಹೆಚ್ಚು ಮಂದಿಗೆ ಗಾಯ | Goa Temple Stampede
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಪಾಕ್ ಕೈವಾಡವಿರುವುದು ಖಚಿತವಾಗಿದ್ದೇ ತಡ ಪಾಕ್ ಜತೆಗಿನ ಸಿಂಧೂ ನೀರು ಹಂಚಿಕೆ, ಪಾಕ್ ಪ್ರಜೆಗಳ ವೀಸಾ ರದ್ದು ಸೇರಿದಂತೆ ಭಾರತ ಸರ್ಕಾರ ಹಲವು ಕಠಿಣ ನಿರ್ಣಯಗಳನ್ನು ಇತ್ತೀಚೆಗಷ್ಟೇ ಘೋಷಿಸಿತು. ಪಾಕಿಸ್ತಾನಿ ಪ್ರಜೆಗಳು ಭಾರತ ಬಿಟ್ಟು ತೊಲಗುವಂತೆ ಆದೇಶಿಸಿದ ಸರ್ಕಾರ, ತಮ್ಮೊಂದಿಗೆ ಯಾವ ಸಂಪರ್ಕವು ಪಾಕ್ ಇಟ್ಟುಕೊಳ್ಳಬಾರದು ಎನ್ನುವಂತೆ ಅಟ್ಟಾರಿ-ವಾಘಾ ಗಡಿ ಕೂಡ ಬಂದ್ ಮಾಡಿದೆ. ಈ ಎಲ್ಲಾ ಬೆಳವಣಿಗೆಯಿಂದ ತತ್ತರಿಸಿ ಹೋಗಿರುವ ಪಾಕ್, ಭಾರತದೊಂದಿಗೆ ಯುದ್ಧ ಮಾಡುವ ಸೊಕ್ಕಿನ ಮಾತುಗಳನ್ನಾಡಿದೆ.
ಸದ್ಯ ಎರಡು ದೇಶಗಳ ಮಧ್ಯೆ ಉದ್ವಿಗ್ನತೆ ತೀವ್ರಗೊಂಡಿದ್ದು, ಹಲವು ಕಠಿಣ ನಿರ್ಧಾರಗಳ ಬೆನ್ನಲ್ಲೇ ಇದೀಗ ಭಾರತ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನದಿಂದ ಭಾರತಕ್ಕೆ ಬರುವ ಎಲ್ಲಾ ವಸ್ತುಗಳ ಆಮದನ್ನು ಸರ್ಕಾರ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಆದೇಶ ಕೂಡ ಹೊರಡಿಸಲಾಗಿದೆ. ವಾಣಿಜ್ಯ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಪಾಕಿಸ್ತಾನದ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.
"ಪಾಕಿಸ್ತಾನದಲ್ಲಿ ತಯಾರಾಗಿ, ಇಲ್ಲಿಗೆ ರಫ್ತು ಆಗುವ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗುವುದು" ಎಂದು ಮೇ.2 ರಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಒಂದು ನಿಬಂಧನೆಯನ್ನು ವಿದೇಶಿ ವ್ಯಾಪಾರ ನೀತಿ (FTP) 2023ಕ್ಕೆ ಸೇರಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧವನ್ನು ವಿಧಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ,(ಏಜೆನ್ಸೀಸ್).