ನವದೆಹಲಿ: ಭಾರತ ಮತ್ತು ಅಮೆರಿಕ ಇಂದು (ಫೆ.25) 3 ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಜಂಟಿ ಸುದ್ದಿಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.
ಹಾಗೇ ಎರಡೂ ದೇಶಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಕಾರ್ಯತಂತ್ರ ಪಾಲುದಾರಿಕೆಯನ್ನು ಈ ರಕ್ಷಣಾ ಒಪ್ಪಂದ ಪ್ರತಿಬಿಂಬಿಸುತ್ತದೆ. 3 ಬಿಲಿಯನ್ ಯುಎಸ್ ಡಾಲರ್ಗಳ ರಕ್ಷಣಾ ಒಪ್ಪಂದದ ಅನ್ವಯ ಭಾರತ ಯುಎಸ್ನಿಂದ 2.6 ಬಿಲಿಯನ್ ಡಾಲರ್ಗಳ 24 ಎಂಎಚ್-60 ರೋಮಿಯೋ ಹೆಲಿಕಾಪ್ಟರ್ಗಳನ್ನು ಖರೀದಿಸಲಿದೆ.
ಹಾಗೇ 800 ಮಿಲಿಯನ್ ಡಾಲರ್ ಮೌಲ್ಯದ ಆರು ಎಚ್-64ಇ (AH-64E) ಅಪಾಚೆ ಹೆಲಿಕಾಪ್ಟರ್ಗಳನ್ನು ಪಡೆಯುವ ಒಪ್ಪಂದಕ್ಕೂ ಇಂದು ಸಹಿ ಹಾಕಲಾಗಿದೆ ಎಂದು ಮೋದಿ ತಿಳಿಸಿದರು.
ಭಾರತ ಹಾಗೂ ಅಮೆರಿಕ ಸಮಗ್ರ ಮುಕ್ತ ವ್ಯಾಪಾರದ ಒಪ್ಪಂದ ಮಾಡಿಕೊಳ್ಳುವತ್ತ ಚಿಂತನೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಎರಡೂ ದೇಶಗಳ ನಡುವಿನ ಸಂಬಂಧ ಈಗಿನಷ್ಟು ಉತ್ತಮವಾಗಿ ಯಾವತ್ತೂ ಇರಲಿಲ್ಲ. ಎರಡೂ ದೇಶಕ್ಕೆ ಲಾಭವಾಗುವಂತಹ ಒಪ್ಪಂದಗಳನ್ನು ಮಾಡಿಕೊಳ್ಳುವ ಆಶಯಹೊಂದಿದ್ದೇನೆ ಎಂದು ತಿಳಿಸಿದರು. (ಏಜೆನ್ಸೀಸ್)