ನ್ಯೂಸ್

ಲಡಾಖ್​ನಲ್ಲಿ ಎಲ್ಲ ವಿವಾದಿತ ಪ್ರದೇಶಗಳಿಂದ ಹಿಂದಕ್ಕೆ ಸರಿದ ಚೀನಾ ಸೇನೆ

ನವದೆಹಲಿ: ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಭಾನುವಾರ ಮಾತುಕತೆ ನಡೆಸಿದ ಬಳಿಕ ಭಾರತ ಮತ್ತು ಚೀನಾದ ಸೇನಾಪಡೆಗಳು ಲಡಾಖ್​ನ ವಿವಾದಿತ ಪ್ರದೇಶದಿಂದ 2 ಕಿ.ಮೀ.ನಷ್ಟು ಹಿಂದಕ್ಕೆ ಸರಿದಿವೆ. ಗಸ್ತು ಪಾಯಿಂಟ್​ 15 ಮತ್ತು ಹಾಟ್​ಸ್ಪ್ರಿಂಗ್ಸ್​ನಲ್ಲಿನ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡಿದೆ. ಗೋಗ್ರಾದಲ್ಲಿನ ಗಸ್ತು ಪಾಯಿಂಟ್​ 17ಎ ಬಳಿಯಿಂದ 2 ಕಿ.ಮೀ. ಹಿಂದಕ್ಕೆ ಸರಿಯುವ ಪ್ರಕ್ರಿಯೆ ಗುರುವಾರದಂದು ನಡೆಯಲಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

ಪ್ಯಾಂಗಾಂಗ್​ ಸರೋವರದ ಫಿಂಗರ್​ 4 ಪ್ರದೇಶದಲ್ಲಿ ಚೀನಿ ಯೋಧರ ಚಲನವಲನ ಕಂಡುಬಂದಿದೆ. ಅಲ್ಲಿನ ಟೆಂಟ್​ಗಳು ಮತ್ತು ವಾಹನಗಳನ್ನು ತೆರವುಗೊಳಿಸಲಾಗಿದೆ. ಆದರೆ ಏಣುಗಳಲ್ಲಿ ಇನ್ನೂ ಟೆಂಟ್​ಗಳು ಹಾಗೆಯೇ ಇದ್ದು ಅವುಗಳಲ್ಲಿ ಯೋಧರು ಇದ್ದಾರೆ ಎಂದು ಮಾಹಿತಿ ನೀಡಿವೆ.

ಅಂದಾಜು ನಾಲ್ಕು ದಶಕಗಳ ಬಳಿಕ ಭಾರತ ಮತ್ತು ಚೀನಾ ಯೋಧರ ನಡುವೆ ಉಂಟಾದ ರಕ್ತಸಿಕ್ತ ಘರ್ಷಣೆ ನಡೆದ ಗಲ್ವಾನ್​ ಕಣಿವೆ ಪ್ರದೇಶದಿಂದ ಉಭಯ ಸೇನೆಗಳು ಮಂಗಳವಾರವೇ ಕಾಲ್ತೆಗೆದಿದ್ದವು. ಉಪಗ್ರಹ ಚಿತ್ರಗಳು ಕೂಡ ಇದನ್ನು ಖಚಿತಪಡಿಸಿದ್ದವು.

ಇದೀಗ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ನಿಖರವಾಗಿ ವಾಸ್ತವ ಗಡಿರೇಖೆಯ ತಮ್ಮ ಭಾಗದ ಕಡೆಯಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ಹೇಳಿವೆ.