ನ್ಯೂಸ್

ಉದ್ವಿಗ್ನತೆಗೆ ಕುಸಿದ ಸೂಚ್ಯಂಕ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ತಲೆದೋರಿರುವ ಬಿಕ್ಕಟ್ಟು ದೇಶದ ಷೇರುಪೇಟೆ ಮೇಲೂ ಪರಿಣಾಮ ಬೀರಿದ್ದು, ಗುರುವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ) ಸೆನ್ಸೆಕ್ಸ್ 412 ಅಂಕ ಕುಸಿದು (0.51%) 80,335ಕ್ಕೆ ಸ್ಥಿರಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 759 ಅಂಶ ಇಳಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್​ಎಸ್​ಇ) ನಿಫ್ಟಿ 141 ಅಂಕ ಇಳಿಕೆಯಾಗಿ (0.58%) 24,274ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಬಿಎಸ್​ಇ ಮಿಡ್ ಕ್ಯಾಪ್ 816 ಅಂಕ ಇಳಿಕೆಯಾಗಿ (1.90%) 42,154ಕ್ಕೆ ಸ್ಥಿರಗೊಂಡಿತು. ಬಿಎಸ್​ಇ ಸ್ಮಾಲ್ ಕ್ಯಾಪ್ 495 ಅಂಕ ಕುಸಿತ ಕಂಡು (1.05%) 46,883ಕ್ಕೆ ತಲುಪಿತು.

ಸೆನ್ಸೆಕ್ಸ್​ನ 30 ಷೇರುಗಳಲ್ಲಿ 26 ನಷ್ಟದೊಂದಿಗೆ ವಹಿವಾಟು ಮುಗಿಸಿದವು. ನಿಫ್ಟಿಯ 50 ಷೇರುಗಳಲ್ಲಿ 45 ನಷ್ಟ ಅನುಭವಿಸಿದವು. ಸೆನ್ಸೆಕ್ಸ್ ಗುಚ್ಛದಲ್ಲಿನ ಎಟರ್ನಲ್, ಮಹೀಂದ್ರ ಆಂಡ್ ಮಹೀಂದ್ರ, ಮಾರುತಿ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಭಾರ್ತಿ ಏರ್​ಟೆಲ್, ಬಜಾಜ್ ಫಿನ್​ಸರ್ವ್, ಏಷ್ಯನ್ ಪೇಂಟ್ಸ್, ಪವರ್ ಗ್ರಿಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳ ಮೌಲ್ಯ ಇಳಿಕೆಯಾಗಿದೆ. ಕೋಟಕ್ ಮಹೀಂದ್ರ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಟೈಟನ್, ಎಚ್​ಸಿಎಲ್ ಟೆಕ್, ಟಾಟಾ ಮೋಟರ್ಸ್, ಇನ್ಪೋಸಿಸ್, ಟಿಸಿಎಸ್ ಷೇರಿನ ಮೌಲ್ಯ ಏರಿಕೆ ಕಂಡವು.

ತಲ್ಲಣಿಸಿದ ಪಾಕ್ ಷೇರುಪೇಟೆ

ಕರಾಚಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶದ ಉಗ್ರರ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿದ ಬಳಿಕ ಪಾಕಿಸ್ತಾನ ಷೇರು ಸೂಚ್ಯಂಕ (ಕರಾಚಿ 100 ಇಂಡೆಕ್ಸ್) ಗುರುವಾರ 6,482 ಅಂಕ (ಶೇಕಡ 5.89%) ಕುಸಿದು, 1,03,526 ಅಂಕಕ್ಕೆ ತಲುಪಿತು. ಭಾರಿ ಕುಸಿತದ ಕಾರಣ ವಹಿವಾಟನ್ನು ಒಂದು ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಕೂಡ 6,500 ಅಂಕ ಕುಸಿದಿತ್ತು. ಅಂದರೆ, ಎರಡೇ ದಿನಗಳಲ್ಲಿ ಪಾಕ್ ಷೇರುಪೇಟೆ 10 ಸಾವಿರಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಭೆ ಇಂದು (ಶುಕ್ರವಾರ) ನಡೆಯಲಿದ್ದು, ಪಾಕ್​ಗೆ ಸಾಲ ನೀಡುವ ಬಗ್ಗೆ ನಿರ್ಧಾರವಾಗಲಿದೆ. ಹೀಗಾಗಿ, ಪಾಕ್ ಹೂಡಿಕೆದಾರರು ಈ ಸಭೆಯತ್ತ ಚಿತ್ತ ಹರಿಸಿದ್ದು, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಐಎಂಎಫ್ ಹೊಸದಾಗಿ ಪಾಕ್​ಗೆ ನೆರವು ನಿಧಿಯನ್ನು ನೀಡಲು ನಿರಾಕರಿಸಿದರೆ, ಅದರಿಂದ ಪಾಕ್ ಆರ್ಥಿಕತೆ ಮತ್ತಷ್ಟು ಬಿಕ್ಕಟ್ಟು ಎದುರಿಸಲಿದೆ.