ರಾಣೆಬೆನ್ನೂರ: ರಾಜಕೀವಾಗಿ ಮಾತ್ರವಲ್ಲದೆ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾತಂತ್ರ್ಯ ದೊರೆತಾಗ ಮಾತ್ರ ನಿಜವಾದ ಸ್ವಾತಂತ್ರ್ಯದೊರೆತಂತಾಗುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
76ನೇ ಸ್ವಾತಂತ್ರ್ಯದಿನಾಚರಣೆ ನಿಮಿತ್ತ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ನಗರದ ಮುನ್ಸಿಪಲ್ ಮೈದಾನದಲ್ಲಿ ಏರ್ಪಡಿಸಿದ್ದ ಧ್ವಜಾರೋಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದ್ದು ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಸಂಸ್ಕೃತಿಯ ಪಾಠ ಕಲಿಸಿ ಹೋಗಿದ್ದಾರೆ. ಬುದ್ಧ, ಬಸವಣ್ಣ, ಮಹಾತ್ಮ ಗಾಂಧಿ, ಅಂಬೇಡ್ಕರ್‌ರಂತಹ ಮಹಾತ್ಮರು ಜನಿಸಿದ ಪುಣ್ಯ ಭೂಮಿ ನಮ್ಮ ಭಾರತವಾಗಿದೆ. ರಾಜ್ಯ ಸರ್ಕಾರ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಪರಿಕಲ್ಪನೆ ಹೊಂದಿದ್ದು ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಪೈಕಿ ಈಗಾಗಲೇ ಮೂರು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಮಾತನಾಡಿ, ಅನೇಕ ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಸ್ವಾತಂತ್ರೃ ದಿನಾಚರಣೆಯ ಉದ್ದೇಶವಾಗಿದೆ. ದೇಶದ ಸ್ವಾತಂತ್ರ್ಯದ ಚಳುವಳಿಯಲ್ಲಿ ನಮ್ಮ ಜಿಲ್ಲೆಯವರಾದ ಮೈಲಾರ ಮಹದೇವಪ್ಪ, ಹಳ್ಳಿಕೇರಿ ಗುದ್ಲೇಪ್ಪ, ಮೆಣಸಿನಹಾಳ ತಿಮ್ಮನಗೌಡರು ಮುಂತಾದ ಮಹನೀಯರ ಪಾತ್ರ ಪ್ರಮುಖವಾಗಿದೆ ಎಂದರು.
ಅಪರಾಧ ವಿಭಾಗದ ಪಿಎಸ್‌ಐ ಎಚ್.ಎನ್. ದೊಡ್ಡಮನಿ ನೇತೃತ್ವದಲ್ಲಿ ಪೋಲಿಸ್, ಗೃಹರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್, ಗೈಡ್, ಸೇವಾದಳ ಹಾಗೂ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಆಕರ್ಷಕ ಪಥಸಂಚಲನ ನಡೆಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ವಿವಿಧ ಮನೋರಂಜನಾ ಕಾರ್ಯಕ್ರಮ ಪ್ರದರ್ಶಿಸಿ ನೆರೆದಿದ್ದ ಜನರನ್ನು ರಂಜಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವನರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಅಂಗವಿಲಕರಿಗೆ ಸರ್ಕಾರದಿಂದ ಕೊಡಮಾಡಿದ ತ್ರಿಚಕ್ರ ವಾಹನಗಳನ್ನು ಶಾಸಕರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.