| ಬೆಂಕಿ ಬಸಣ್ಣ ನ್ಯೂಯಾರ್ಕ್
ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಭಾರತದ 75ನೇ ಸ್ವಾತಂತ್ರ್ಯ ಮಹೋತ್ಸವದ ದಿನವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಭರ್ಜರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಟ್ರೈ ಸಿಟಿ ಇಂಡಿಯನ್ ಅಸೋಸಿಯೇಷನ್ ಆಯೋಜಿಸಿತ್ತು.
ಅದರಲ್ಲಿ ಈ ಜಿಲ್ಲೆಯ ಸಂಸದ ( Congressman) ಪಾಲ್ ಟಾಂಕೋ, ಕಾಲನಿಯ ಜನಪ್ರಿಯ ರಾಜಕಾರಣಿ ಕೆಲ್ಲಿ ಮೆಟೀಜಾ, ಸ್ಥಳೀಯ ಭಾರತ ಸಂಘದ ಅಧ್ಯಕ್ಷ ಪಾಲ್ ಉಪ್ಪಾಲ್, ಮಾಜಿ ಅಧ್ಯಕ್ಷ ಬೆಂಕಿ ಬಸಣ್ಣ, ಚೇರ್ಮನ್ ರಾಮ್ ಲಾಲುಕೋಟ, ಭಾರತ ಸೇನೆಯ ನಿವೃತ್ತ ಕರ್ನಲ್ ಬಾಲರಾಜ್ ಮಲ್ಹೋತ್ರಾ ಮುಂತಾದ ಗಣ್ಯರು ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಪಾಲ್ ಟಾಂಕೋ ಅವರು, ಭಾರತೀಯರು ಅಮೆರಿಕದ ವೈಜ್ಞಾನಿಕ, ಶೈಕ್ಷಣಿಕ, ವೈದ್ಯಕೀಯ, ಔದ್ಯೋಗಿಕ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಮಾಡುತ್ತಿರುವ ಆಗಾಧ ಸಾಧನೆಯನ್ನು ಕೊಂಡಾಡಿದರು. ಭಾರತೀಯರ ಹುಟ್ಟುಗುಣವಾದ ವಿನಯ, ತಾಳ್ಮೆ, ಸಹಬಾಳ್ವೆ, ಧರ್ಮ ಸಹಿಷ್ಣುತೆ, ವಿಶಾಲ ಮನೋಭಾವನೆಗಳನ್ನು ಹಾಡಿ ಹೊಗಳಿದರು.
ಟ್ರೈ ಸಿಟಿ ಇಂಡಿಯನ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷ ಪಾಲ್ ಉಪ್ಪಾಲ್ ಮಾತನಾಡಿ, ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸೆ ಮತ್ತು ಉಪವಾಸವೆಂಬ ಅಸ್ತ್ರಗಳಿಂದ ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಿರು ಪರಿಚಯ ಮಾಡಿಕೊಟ್ಟರು.
ವೈಎಂಸಿಎನ ಸುಂದರ ಮೈದಾನದಲ್ಲಿ ನಡೆದ ಈ ಸಮಾವೇಶದಲ್ಲಿ ಸರ್ವರಿಗೂ ಬಿಸಿಯಾದ ರುಚಿಯಾದ ಭಾರತೀಯ ಶೈಲಿಯ ಊಟವನ್ನು ಬಡಿಸಲಾಯಿತು. ಅದರಲ್ಲೂ ಈ ಸಮಾರಂಭದಲ್ಲಿ 75ನೇ ಸ್ವಾತಂತ್ರೋತ್ಸವ ಎಂಬ ಅಕ್ಷರಗಳೊಂದಿಗೆ ಅಲಂಕಾರಗೊಂಡಿದ್ದ ವಿಶೇಷವಾದ ಕೇಕ್ ಕತ್ತರಿಸಲಾಯಿತು.