ನವದೆಹಲಿ: ದೇಶವು 77 ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದೆ. ಆಗಸ್ಟ್ 15, 1947 ರಂದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅಂದಿನಿಂದ ಈ ಸಂಪ್ರದಾಯ ಮುಂದುವರಿದಿದೆ. ಪ್ರತಿ ವರ್ಷ ಆಗಸ್ಟ್ 15 ರಂದು ಧ್ವಜಾರೋಹಣ ಮಾಡಲು ಪ್ರಧಾನಿ ಇಲ್ಲಿಗೆ ಬರುತ್ತಾರೆ. ಈ ವರ್ಷ, ಪ್ರಧಾನಿ ನರೇಂದ್ರ ಮೋದಿ ಅವರು ಸತತ ಹತ್ತನೇ ಬಾರಿಗೆ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿದರು. ಹತ್ತು ವರ್ಷಗಳ ಕಾಲ ಈ ಸಂಪ್ರದಾಯವನ್ನು ಅನುಸರಿಸುತ್ತಿರುವ ನಾಲ್ಕನೇ ಪ್ರಧಾನಿಯಾಗಿ ಮೋದಿ ದಾಖಲೆ ಬರೆದಿದ್ದಾರೆ. ಬೆಳಗ್ಗೆ 7.30ಕ್ಕೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದರು.
ಸ್ವಾತಂತ್ರ್ಯ ದಿನದಂದು ಸಶಸ್ತ್ರ ಪಡೆಗಳು ಮತ್ತು ದೆಹಲಿ ಪೊಲೀಸರಿಂದ ಪ್ರಧಾನಿ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಪ್ರಧಾನಮಂತ್ರಿಯವರ ಭಾಷಣದ ನಂತರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ನಂತರ 21 ಗನ್ ಸೆಲ್ಯೂಟ್ ಅನ್ನು ಮಾಡಲಾಗುತ್ತದೆ. ಸಮಾರಂಭದ ಕೊನೆಯಲ್ಲಿ, ಧ್ವಜದ ಬಣ್ಣಗಳ ಬಲೂನುಗಳನ್ನು ಆಕಾಶಕ್ಕೆ ಬಿಡಲಾಗುತ್ತದೆ.
ಅಂದಹಾಗೆ ಮೊದಲ ಪ್ರಧಾನಿ ನೆಹರೂ ಅವರು ಸ್ವಾತಂತ್ರ್ಯ ದಿನದಂದು ಹೆಚ್ಚು ಬಾರಿ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಪುತ್ರಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಂತರದ ಸ್ಥಾನದಲ್ಲಿದ್ದಾರೆ. ಜವಾಹರಲಾಲ್ ನೆಹರು ಅವರು 17 ಬಾರಿ ರಾಷ್ಟ್ರಧ್ವಜವನ್ನು ಹಾರಿಸಿದರು.
ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನ ಮಂತ್ರಿಗಳ ಪಟ್ಟಿಯನ್ನು ನೋಡೋಣ ಬನ್ನಿ...
ಜವಾಹರಲಾಲ್ ನೆಹರು
ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು 1947 ಆಗಸ್ಟ್ 15 ರಂದು ಮೊದಲ ಬಾರಿಗೆ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿದರು. ಅವರು ಮೇ 27, 1964 ರವರೆಗೆ ಸುಮಾರು 18 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ದಿನದಂದು 17 ಬಾರಿ ಧ್ವಜಾರೋಹಣ ಮಾಡಿದರು. ಅತಿ ಹೆಚ್ಚು ಬಾರಿ ಧ್ವಜಾರೋಹಣ ಮಾಡಿದ ಪ್ರಧಾನಿಗಳ ಪಟ್ಟಿಯಲ್ಲಿ ಜವಾಹರಲಾಲ್ ನೆಹರೂ ಮೊದಲ ಸ್ಥಾನದಲ್ಲಿದ್ದಾರೆ.
ಇಂದಿರಾ ಗಾಂಧಿ
ಇಂದಿರಾ ಗಾಂಧಿ ಎರಡನೇ ಸ್ಥಾನ ಪಡೆಯುತ್ತಾರೆ. ಇಂದಿರಾಗಾಂಧಿ 16 ಬಾರಿ ಧ್ವಜಾರೋಹಣ ಮಾಡಿದರು. ಇಂದಿರಾಗಾಂಧಿ ಜನವರಿ 1966 ರಿಂದ ಮಾರ್ಚ್ 1977 ರವರೆಗೆ ಮತ್ತು ಜನವರಿ 14, 1980 ರಿಂದ ಅಕ್ಟೋಬರ್ 31, 1984 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ ಅವರು ಸತತ ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಮೇ 22, 2004 ರಿಂದ ಮೇ 26, 2014 ರವರೆಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು.
ಪ್ರಧಾನಿ ನರೇಂದ್ರ ಮೋದಿ
ಸ್ವಾತಂತ್ರ್ಯ ದಿನಾಚರಣೆಯಂದು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಹತ್ತನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮೇ 10, 2014 ರಂದು ಅವರು ಮೊದಲ ಬಾರಿಗೆ ಪ್ರಧಾನಿಯಾದರು.