ಬೆಂಗಳೂರು: ಅಪರಿಚಿತನೊಬ್ಬ ಪತ್ರ ಬರೆದು ಲೈಂಗಿಕ ಕಿರುಕುಳಕ್ಕೆ ಯತ್ನಿಸಿರುವ ಘಟನೆ ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫ್ಲಾಟ್ನ ಬಾಗಿಲು ಬೆಲ್ ಮಾಡಿ ಪತ್ರ ಇಟ್ಟು ಕಿರಾತಕ ಪರಾರಿಯಾಗಿದ್ದಾನೆ. ಮಹಿಳೆ ಬಾಗಿಲು ತೆರೆದು ನೋಡಿದಾಗ ಹೊರಗಡೆ ಪತ್ರ ಬಿಟ್ಟರೆ, ಬೇರೆ ಯಾರು ಇರಲಿಲ್ಲ. ಪತ್ರದಲ್ಲಿ ಏನಿರಬಹುದು ಅಂತಾ ತೆಗೆದು ನೋಡಿದರೆ, ಅದರಲ್ಲಿ ಅಸಭ್ಯವಾಗಿ ಬರೆಯಲಲಾಗಿದೆ.
ನನಗೆ ಸರ್ವೀಸ್ ಕೊಡ್ತೀರಾ? ಕೊಡುವುದಾದರೆ, ಬೇಸ್ಮೆಂಟ್ಗೆ ಬನ್ನಿ. ಒಂದು ದಿನಕ್ಕೆ 50 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ಕೂಡಲೇ ಅಪಾರ್ಟ್ಮೆಂಟ್ನ ಸಿಬ್ಬಂದಿಗೆ ವಿಚಾರವನ್ನು ಮುಟ್ಟಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಮಹಿಳೆ ದೂರು ದಾಖಲಿಸಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ಅಪಾರ್ಟ್ಮೆಂಟ್ನಲ್ಲಿರುವವರ ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)