ಸಾಗರ: ಮನುಷ್ಯ ದುರಾಸೆಯಿಂದ ಬದುಕಿನ ಮೌಲ್ಯ ಕಳೆದುಕೊಳ್ಳುತ್ತಿದ್ದಾನೆ. ಭ್ರಷ್ಟಾಚಾರದ ಜಾಲದಲ್ಲಿ ಸಿಲುಕಿ ಅಡ್ಡದಾರಿ ಹಿಡಿಯುತ್ತಿದ್ದಾನೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.
ಸಾಗರ ತಾಲೂಕಿನ ಎಂ.ಎಲ್.ಹಳ್ಳಿಯಲ್ಲಿ ರಾಮಕೃಷ್ಣ ವಿವೇಕಾನಂದ ವಸತಿ ವಿದ್ಯಾಲಯ, ರಾಮಕೃಷ್ಣ ಸಮೂಹ ಸಂಸ್ಥೆ ಹಾಗೂ ಯುವ ಸ್ಫೂರ್ತಿ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾರಲ್ಲಿ ಹಣ, ಅಧಿಕಾರ, ಸಂಪತ್ತು ಗಳಿಸುವ ಹಪಾಹಪಿ ಇರುತ್ತದೆಯೋ ಅಂಥವರಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚುತ್ತದೆ. ಇದ್ದುದರಲ್ಲಿಯೇ ಸಂತೋಷಪಡುವ, ಅಲ್ಪಸ್ವಲ್ಪ ದಾನ ಮಾಡಿ ತೃಪ್ತಿಪಡುವ, ಮಾನವೀಯ ಮೌಲ್ಯ ಬಿತ್ತುವ ಕೆಲಸವಾಗಬೇಕು. ನಾನು ಲೋಕಾಯುಕ್ತಕ್ಕೆ ಬರುವ ಮೊದಲು ಎಲ್ಲವೂ, ಎಲ್ಲರೂ ಒಳ್ಳೆಯವರು ಎಂದುಕೊಂಡಿದ್ದೆ. ಆದರೆ ಲೋಕಾಯುಕ್ತಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಅನಾವರಣವಾಗುತ್ತ ಹೋಯಿತು ಎಂದರು.
ಯೋಧರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಭ್ರಷ್ಟಾಚಾರ ಸಮಾಜಕ್ಕೆ ಶಾಪ. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟರ ಹೆಡೆಮುರಿಕಟ್ಟುವ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಎಲ್ಲಿಯವರೆಗೆ ನಗದು ವ್ಯವಹಾರ ಇರುತ್ತದೆಯೋ ಅಲ್ಲಿಯವರೆಗೆ ಭ್ರಷ್ಟಾಚಾರ ನಿಯಂತ್ರಣ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಆನ್‌ಲೈನ್ ಮೂಲಕ ಹಣಕಾಸು ವಹಿವಾಟಿನ ಕಡೆ ಗಮನ ಹರಿಸಬೇಕು. ಎಲ್ಲ ವ್ಯವಹಾರಗಳಲ್ಲೂ ಪಾರದರ್ಶಕತೆ ಮುಖ್ಯ ಎಂದರು.
ರಾಮಕೃಷ್ಣ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ.ಎಂ.ದೇವರಾಜ್, ಸಿ.ಬಿ.ಸುಂದರೇಶ್, ಮಹಾಬಲೇಶ್ವರ, ಕೆ.ಷಣ್ಮುಖಪ್ಪ, ಕೆ.ವೀರೇಶ್, ಚಂದ್ರಶೇಖರ್, ಸತೀಶ್ ನಾಯ್ಕ, ರಂಗನಾಥ್, ಚಂದ್ರಶೇಖರ್ ಇ. ಚಿರಂತ್, ಸರಿತಾ ದೇವರಾಜ್. ಮನ್ಸೂರ್ ಶರೀಫ್, ಹುಚ್ಚಪ್ಪ ಇತರರಿದ್ದರು.