ನ್ಯೂಸ್

ಭಾಷಾಭಿವೃದ್ಧಿಗಾಗಿ ರಚನಾತ್ಮಕ ಕಾರ್ಯ; ಅಧ್ಯಕ್ಷ ಅವಧಿ ಹೆಚ್ಚಿಸಿಕೊಂಡಿದ್ದು ನ್ಯಾಯಸಮ್ಮತ ನಿರ್ಧಾರ

ಸರ್ಕಾರಿ ಅಧಿಕಾರಿಯಾಗಿದ್ದು ಅನೇಕ ಜನಪರ, ಗಟ್ಟಿ ನಿರ್ಧಾರ ಕೈಗೊಳ್ಳುವ ಮೂಲಕ ಪ್ರಸಿದ್ಧರಾದ ಡಾ. ಮನು ಬಳಿಗಾರ್, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಕರೆಯಲಾಗುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಐದೂವರೆ ವರ್ಷದ ಅಂತಿಮ ಘಟ್ಟದಲ್ಲಿದ್ದಾರೆ. ಚುನಾವಣೆಗೆ ಮುನ್ನ ನೀಡಿದ ಆಶ್ವಾಸನೆಗಳು, ಅವಧಿಯಲ್ಲಿ ಎದುರಾದ ಸವಾಲುಗಳು, ಅವಧಿ ವಿಸ್ತರಣೆ, ಚುನಾವಣೆ ಸೇರಿ ಅನೇಕ ವಿಷಯಗಳ ಬಗ್ಗೆ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಕ್ಲಬ್​ಹೌಸ್ ಸಂವಾದದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಐದೂವರೆ ವರ್ಷದಲ್ಲಿ ಕನ್ನಡ ಕಟ್ಟುವ ಕೆಲಸ

2016ರಲ್ಲಿ ಕನ್ನಡ ಸಾಹಿತ್ಯ ಪರಿಷತ್​ಗೆ 101ನೇ ವರ್ಷ. ಈ ಅವಧಿಯಲ್ಲಿ ಅಧ್ಯಕ್ಷನಾಗಿ ಬಂದ ನಾನು ಶತಮಾನದಲ್ಲಿ ಮೊದಲ ಹೆಜ್ಜೆಗಳನ್ನು ಇಟ್ಟೆ. ಸರ್ಕಾರ ಹಾಗೂ ಸಾರ್ವಜನಿಕರ ಕಡೆಯಿಂದ ಆರ್ಥಿಕ ಸಹಾಯ ಬರುತ್ತಿರಲಿಲ್ಲ, ಮೂರ್ನಾಲ್ಕು ದಶಕದಲ್ಲಿ ಹಣಕಾಸು ಸಹಾಯ ಹೆಚ್ಚಾಗಿದೆ. ಕಸಾಪ ಶತಮಾನೋತ್ಸವ ಕಟ್ಟಡ ಆಗಬೇಕೆಂದು ನಿಕಟಪೂರ್ವ ಅಧ್ಯಕ್ಷ ಪುಂಡಲೀಕ ಹಾಲಂಬಿ ಬಯಸಿದ್ದರು. ಅವರ ಅವಧಿಯಲ್ಲಿ 4 ಕೋಟಿ ರೂ. ಮಂಜೂರಾಗಿ, ಶಂಕುಸ್ಥಾಪನೆಯೂ ಆಗಿತ್ತು. ಆದರೂ 2 ವರ್ಷವಾದರೂ ಕಾರ್ಯಾರಂಭ ಆಗಿರಲಿಲ್ಲ. ನಾನು ಹೊಣೆ ವಹಿಸಿಕೊಂಡ 10 ದಿನದಲ್ಲಿ ಕಾರ್ಯ ಆರಂಭವಾಯಿತು. 19 ತಿಂಗಳಲ್ಲಿ ಪೂರ್ಣಗೊಂಡ ಕಟ್ಟಡವವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಿದರು. ಕನ್ನಡಿಗರ ಪ್ರಥಮ ರಾಷ್ಟ್ರೀಯ ಸಮಾವೇಶವನ್ನು ನವದೆಹಲಿಯಲ್ಲಿ ಮಾಡಲಾಯಿತು. ಮುಂಬೈನಲ್ಲಿ ಎರಡನೇ ಸಮಾವೇಶ ಆಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹ್ರೇನ್​ನಲ್ಲಿ ಸಮ್ಮೇಳನ ನಡೆಯಿತು. ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ಮಾಡಲಾಯಿತು. ನೇಪಾಳಿ ಭಾಷೆಯ 51 ಕಥೆಗಳನ್ನು ಕನ್ನಡಕ್ಕೆ, ಕನ್ನಡದ 51 ಪ್ರಸಿದ್ಧ ಕಥೆಗಾರರ ಕಥೆಗಳನ್ನು ನೇಪಾಳಿಗೆ ಅನುವಾದಿಸಲಾಯಿತು. ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಕೋಲಾರದಲ್ಲಿ ನಡೆಯಿತು, ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜನೆಯಾಯಿತು. ಅಪೆಕ್ಸ್ ಬ್ಯಾಂಕ್​ನಿಂದ 2 ಕೋಟಿ ರೂ. ಪಡೆದುಕೊಂಡೆವು, ಗ್ರಾಮ ಮಟ್ಟದಿಂದ ಜಿಲ್ಲೆಯವರೆಗೆ 31 ಕಡೆಯಿಂದ ಸ್ಥಿರಾಸ್ಥಿ ಬಂದಿವೆ. ಶಾಸಕರು, ಸಂಸದರು, ಸಾರ್ವಜನಿಕರಿಂದ ಹಣ ಪಡೆದು, 31 ಕನ್ನಡ ಭವನ ನಿರ್ಮಾಣ ಕೈಗೆತ್ತಿಕೊಂಡಿದ್ದೇವೆ. 19 ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ, 7 ಉದ್ಘಾಟನೆಯಾಗಿವೆ. ಉಳಿದ 12 ಪೂರ್ಣಗೊಳಿಸಲು ಹಣ ಇಡಲಾಗಿದೆ. ಚುನಾವಣೆ ವೇಳೆ ನೀಡಿದ ಎಲ್ಲ ಆಶ್ವಾಸನೆ ಈಡೇರಿಸಿದ್ದೇನೆ. ‘ಕಾಯಕ ಪಥ’ ಹಾಗೂ ‘ಕಾಯಕ ನಿರತ’ ಎಂದು ಎರಡು ಕೃತಿಗಳನ್ನು ಈ ಕುರಿತು ಹೊರತಂದಿದ್ದೇನೆ. ಅನಿವಾಸಿ ಭಾರತೀಯ ಲೇಖಕರಿಗೆ ಬಹ್ರೇನ್ ಸಮ್ಮೇಳನದಲ್ಲಿ ಅವಕಾಶ ನೀಡಿದ್ದೇವೆ. ಆಸ್ಟ್ರೇಲಿಯಾದಲ್ಲಿ ಕನ್ನಡ ಭವನ ಕಟ್ಟುವವರಿಗೆ 25 ಲಕ್ಷ ರೂ. ನೀಡಿದ್ದೇವೆ, ವೇದಿಕೆಗೆ ಕಸಾಪ ವೇದಿಕೆ ಎಂದು ಹೆಸರಿಡಲಿದ್ದಾರೆ. ಯಾರೇ ಒಳ್ಳೆಯ ಪುಸ್ತಕ ಬರೆದು ಕಳಿಸಿದರೆ ಆಯ್ಕೆ ಸಮಿತಿಯಲ್ಲಿಟ್ಟು ಪ್ರಕಟಿಸುತ್ತೇವೆ.

ಕನ್ನಡಿಗರಿಗೆ ಉದ್ಯೋಗ: ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಕೆಲಸ ಕೊಡಿಸುವ ಕೊಂಡಿ ಯಾಗಿ ಯೋಜನೆ ಆರಂಭಿಸಲಾಯಿತು. ಮೊದಲ ವರ್ಷ 125 ಜನರಿಗೆ ಸೇರಿ ಇಲ್ಲಿವರೆಗೆ 760 ಜನರಿಗೆ ಉದ್ಯೋಗ ಕೊಡಿಸಲಾಗಿದೆ. ಬಹುರಾಷ್ಟ್ರೀಯ ಕಂಪನಿ ಗಳಿಗೆ 45 ಸಾವಿರ ಅರ್ಜಿ ಕಳಿಸಲಾಗಿದೆ.

ವಿದೇಶದಲ್ಲಿ ಸಮ್ಮೇಳನ: 2020ರ ಏಪ್ರಿಲ್ 25-26ಕ್ಕೆ ಆಸ್ಟ್ರೇಲಿಯಾದ ಮೆಲ್ಬರ್ನ್​ನಲ್ಲಿ ಸಮ್ಮೇಳನ ಆಯೋಜನೆ ಮಾಡಲು ಯೋಜಿಸಿದ್ದೆವು. ಸಮ್ಮೇಳನಾಧ್ಯಕ್ಷರಾಗಲು ಎಸ್.ಎಲ್. ಭೈರಪ್ಪನವರು ಒಪ್ಪಿದ್ದರು. ಮಾರ್ಚ್ 22ಕ್ಕೆ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ಲಾಕ್​ಡೌನ್ ಜಾರಿಯಾಯಿತು. ಮುಂದಿನ ಅಧ್ಯಕ್ಷರು ವಿದೇಶದಲ್ಲಿ ಸಮ್ಮೇಳನ ಮಾಡಬಹುದು.

  • ಮಾತೃಭಾಷೆಯಲ್ಲಿ ಶಿಕ್ಷಣ ನನಸಾಗುವುದು ಯಾವಾಗ?

ಈ ನಿಟ್ಟಿನಲ್ಲಿ ನಮ್ಮ ಶಕ್ತಿಯಿರುವಷ್ಟು ಪ್ರಯತ್ನ ಮಾಡಿದ್ದೇವೆ. ಪತ್ರ, ಹೋರಾಟ, ಧರಣಿ ಮೂರನ್ನೂ ಮಾಡಿದ್ದೇವೆ. ಸಾರ್ವಜನಿಕರಿಂದಲೂ ಪ್ರಯತ್ನ ಆಗಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಬಂದಾಗ ಮಾತೃಭಾಷೆಗೆ ಒತ್ತು ನೀಡಬೇಕು ಎಂಬ ಅಂಶ ಇರಲಿಲ್ಲ. ಇದೇ ಕಾರಣಕ್ಕೆ ಚಿಂತಕರ ಸಭೆ ನಡೆಸಿ ಸಲಹೆ ನೀಡಿದೆವು. ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದ ನಂತರದಲ್ಲಿ, ನಿರ್ದಿಷ್ಟವಾಗಿ ಈ ಬಗ್ಗೆ ನಮೂದಿಸಿದರು. ಇದರಿಂದಾಗಿ ಎಲ್ಲ ಸಾಂವಿಧಾನಿಕ ಭಾಷೆಗಳಿಗೂ ಸಮಾನ ಮನ್ನಣೆ ಸಿಕ್ಕಿದೆ. ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡವಿರಬೇಕೆಂಬ ಪ್ರಯತ್ನಕ್ಕೆ ಅರ್ಧ ಫಲ ಸಿಕ್ಕಿದೆ. ಪೂರ್ತಿ ಫಲ ಸಿಗಲು ನಮ್ಮೆಲ್ಲ ಸಂಸದರು, ಮುಖ್ಯಮಂತ್ರಿ ಕೇಂದ್ರದ ಮೇಲೆ ಒತ್ತಡ ಹೇರಿ, ಕನ್ನಡದಲ್ಲಿಯೇ ಬ್ಯಾಂಕ್, ಅಂಚೆ, ರೈಲ್ವೆ ಪರೀಕ್ಷೆಗಳು ಆಗುವಂತೆ ಮಾಡಬೇಕು.

  • ಕರೊನಾ ಸಮಯದಲ್ಲಿ ಕಷ್ಟದಲ್ಲಿದ್ದವರಿಗೆ ಕಸಾಪ ಸಹಾಯ ಮಾಡಿದೆಯೇ?

ಕೊಡಗು, ದಕ್ಷಿಣ ಕನ್ನಡದಲ್ಲಿ ನೆರೆ ಹಾವಳಿಯಾದಾಗ ಕಸಾಪ ಮೊದಲ ಬಾರಿಗೆ ತನ್ನ ನಿಧಿಯಿಂದ 35 ಲಕ್ಷ ರೂ. ನೀಡಿದೆ. ನಮ್ಮ ಸಿಬ್ಬಂದಿ ವೇತನ, ಗೌರವಧನವನ್ನು ಸಂತ್ರಸ್ತರಿಗೆ ನೀಡಿದ್ದೇವೆ. ಎರಡನೇ ಬಾರಿಗೂ 3.5 ಲಕ್ಷ ರೂ. ನೀಡಿದ್ದೇವೆ.

  • ನಾಡಗೀತೆ ಸಮಯ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುವುದಿಲ್ಲವೇ?

ಧಾಟಿ, ರಾಗ ಯಾವುದಾದರೂ ಇರಲಿ, 2.30 ನಿಮಿಷದಲ್ಲಿ ಸಂಪೂರ್ಣ 8 ನುಡಿ ಹಾಡಬೇಕು, ಅನವಶ್ಯಕ ಪುನರಾವರ್ತನೆ, ಹಿನ್ನೆಲೆ ಸಂಗೀತ ಬೇಡ ಎಂದು ಸರ್ಕಾರಕ್ಕೆ ತಿಳಿಸಿದ್ದೆವು. ಹಿಂದಿನ ಸಚಿವರಾದ ಅರವಿಂದ ಲಿಂಬಾವಳಿ, ಹೊಸ ಸಚಿವ ವಿ.ಸುನೀಲ್​ಕುಮಾರ್ ಅವರಿಗೂ ಹೇಳಿದ್ದೇವೆ. ಇದೊಂದು ಒಳ್ಳೆಯ ಪ್ರಾರಂಭ. ಆದಷ್ಟು ಬೇಗ ನಿರ್ಣಯವಾಗಲಿ ಎಂದು ಕೇಳಿಕೊಳ್ಳುತ್ತೇನೆ.

  • ತಂತ್ರಜ್ಞಾನಕ್ಕೆ ಕನ್ನಡ ಒಗ್ಗಿಸಲು ಏನು ಮಾಡಿದಿರಿ?

ಭಾರತವಾಣಿ ಪೋರ್ಟಲ್ ಜತೆಗೆ ಒಪ್ಪಂದ ಮಾಡಿಕೊಂಡು ಕನ್ನಡ ಪುಸ್ತಕಗಳನ್ನು ಡಿಜಿಟಲೀಕರಿಸಿದ್ದೇವೆ. ಎಲ್ಲ ಪುಸ್ತಕಗಳನ್ನೂ ಡಿಜಿಟಲೀಕರಿಸಲು ನಮ್ಮಿಂದ ಆಗುವುದಿಲ್ಲ, ನಮ್ಮ ಪ್ರಕಟಣೆಗಳು ಮೊದಲು ಮುಗಿಯಲಿ. ಈಗ 150 ಪುಸ್ತಕಗಳು ಆಗಿವೆ, ಮುಂದಿನವರು ಮುಂದುವರಿಸಲಿ.

  • ಹಳೆಗನ್ನಡ, ಮಧ್ಯಕನ್ನಡದ ಜತೆಗೆ ಜಾನಪದ ಸಮ್ಮೇಳನ ಮಾಡಬಹುದಿತ್ತು ಅಲ್ಲವೇ?

ಜಾನಪದಕ್ಕಾಗಿಯೇ ಸಮ್ಮೇಳನ ಮಾಡುವ ಯೋಜನೆ ಇತ್ತು. ಕೋವಿಡ್​ನಿಂದಾಗಿ ಆಗಿಲ್ಲ, ಮುಂದಿನವರು ಮಾಡಬೇಕು. ಇದೇ ವೇಳೆ, 1982-85ರ ನಡುವಿನ ಜಾನಪದ ಕೋಶಗಳು ನಮ್ಮ ಅವಧಿಯಲ್ಲಿ ಪುನರ್​ವುುದ್ರಣ ಆಗಿವೆ.

  • ಕಸಾಪ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ ಎಂಬ ಆರೋಪ ಇದೆಯಲ್ಲ?

ನನ್ನ ಗೌರವಧನ 13.20 ಲಕ್ಷ ರೂ. ನಾನು ಪಡೆದಿಲ್ಲ. ಅತಿಥಿಗಳಿಗೆ ಕಾಫಿ, ಚಹಾ ತರಿಸಿದ್ದರೂ ನನ್ನ ಜೇಬಿನಿಂದ ಪಾವತಿಸಿದ್ದೇನೆ. ನಯಾ ಪೈಸೆ ಅವ್ಯವಹಾರ ನಡೆದಿದ್ದರೂ ಗಮನಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಯಾವ ಆರೋಪವೂ ಇಲ್ಲಿವರೆಗೆ ಬಂದಿಲ್ಲ.

  • ಕೇವಲ 3 ಲಕ್ಷ ಮತದಾರರು ಕಡಿಮೆ ಅಲ್ಲವೇ?

ನಾನು ಅಧಿಕಾರಕ್ಕೆ ಬಂದಾಗ 2.2 ಲಕ್ಷ ಇದ್ದರು, ಈ ಅವಧಿಯಲ್ಲಿ 1.2 ಲಕ್ಷ ಹೊಸ ಸದಸ್ಯರಾಗಿ, 3.25 ಲಕ್ಷ ದಾಟಿದೆ. ಇದು ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ. ಸಂಖ್ಯೆ ಕಡಿಮೆ ಎನ್ನಿಸಿದರೂ ಜಗತ್ತಿನಲ್ಲಿಯೇ ಯಾವುದೇ ಸಾಹಿತ್ಯ ಸಂಸ್ಥೆ ಇಷ್ಟು ಸದಸ್ಯತ್ವ, ವ್ಯವಸ್ಥೆ ಹೊಂದಿಲ್ಲ. ಚುನಾವಣೆ ಪ್ರಕ್ರಿಯೆ ಮೂಲಕ ಅಧ್ಯಕ್ಷರು ಆಯ್ಕೆಯಾಗುವ ಏಕೈಕ ಸಂಸ್ಥೆ ಎಂಬ ಹೆಮ್ಮೆಯೂ ಇದೆ.

  • ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಲು ನೀವು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಇದೆಯಲ್ಲ?

ಚುನಾವಣೆ ಪ್ರಕ್ರಿಯೆ ಆರಂಭಿಸಿ ಎಂದು ಅವಧಿ ಮುಗಿಯುವ ನಾಲ್ಕು ತಿಂಗಳು ಮೊದಲೇ ನಾನು ಸರ್ಕಾರಕ್ಕೆ ಪತ್ರ ಬರೆದೆ. ಚುನಾವಣೆಯೂ ನಿಗದಿಯಾಗಿ ಪ್ರಕ್ರಿಯೆ ನಡೆದಿತ್ತು. ಕೊನೆಯ ಹಂತದಲ್ಲಿ ಕರೊನಾ ಕಾರಣಕ್ಕೆ ಮುಂದೂಡಿಕೆಯಾಯಿತು. ಆಗಸ್ಟ್​ನಲ್ಲಿ ಮತ್ತೆ ಸರ್ಕಾರಕ್ಕೆ ಪತ್ರ ಬರೆದು, ಚುನಾವಣೆಗೆ ಒತ್ತಾಯಿಸಿದೆ. ನನ್ನ ಕಾರ್ಯ ಮಾಡಿದ್ದೇನೆ. ಈಗ ಅವಧಿ ಮುಗಿಯುತ್ತಿದೆ, ಆಡಳಿತಾಧಿಕಾರಿ ನೇಮಕ ಮಾಡಿ ಎಂದು ಪತ್ರ ಬರೆದ ಮೇಲೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ.

  • ನೀವು ರಾಜಕೀಯಕ್ಕೆ ಬರುತ್ತೀರ ಎಂಬ ಮಾತಿದೆಯಲ್ಲ?

ನಾನು ಎಲ್ಲ ಪಕ್ಷದೊಂದಿಗೂ ಸಮಾನ ದೂರ, ಅಂತರದಲ್ಲಿದ್ದೇನೆ. ರಾಜಕೀಯ ಮಾಡಲೇಬೇಕು ಎಂಬ ಅಂಶ ಎಳ್ಳಷ್ಟೂ ಮನಸ್ಸಿನಲ್ಲಿ ಇಲ್ಲ. ಅದು ಅನಿವಾರ್ಯ ಆದಾಗ ಯೋಚಿಸೋಣ.

  • ನಿಮ್ಮ ಅವಧಿಯನ್ನು ನೀವೇ 3 ವರ್ಷದಿಂದ ಐದು ವರ್ಷಕ್ಕೆ ಮುಂದುವರಿಸಿಕೊಂಡಿರಿ. ಸಹಜ ಕಾನೂನಿನನ್ವಯ ತಪ್ಪಲ್ಲವೇ?

ನ್ಯಾಯ, ನೀತಿ, ಧರ್ಮವನ್ನು ಇಟ್ಟುಕೊಂಡು ಈ ಕೆಲಸ ಮಾಡಿದ್ದೇವೆ. ಪ್ರತಿ ಮೂರು ವರ್ಷಕ್ಕೆ ಚುನಾವಣೆ ಬೇಡ, ಎಲ್ಲ ಕಡೆ ಐದು ವರ್ಷ ಇದೆ, ಅದರಂತೆಯೇ ಮಾಡಿ ಎಂದು ಲಿಖಿತವಾಗಿ ಅನೇಕರು ಕೇಳಿಕೊಂಡಿದ್ದರು. ಸಾರ್ವಜನಿಕರ ಹಣ, ಶ್ರಮ ಎರಡೂ ವ್ಯರ್ಥವಾಗುತ್ತದೆ ಎಂದು ಅನೇಕ ಜನರು ಹೇಳಿದ್ದರು. ನನ್ನನ್ನು ಆಯ್ಕೆ ಮಾಡಿ ಕಳಿಸಿದರೆ ಈ ಕಾರ್ಯ ಮಾಡುವೆ ಎಂದು ಆಶ್ವಾಸನೆ ನೀಡಿದ್ದೆ. ನನ್ನ ನಿರ್ಧಾರ ಕಾನೂನು ಪ್ರಕಾರ ಇರಲಿಲ್ಲ ಎಂದರೆ ಕೆಳಗಿನ ಕೋರ್ಟ್ ನಿಂದ ಹಿಡಿದು ಹೈಕೋರ್ಟ್​ವರೆಗೆ ಎಲ್ಲ ಕಡೆಯೂ ಜಯ ಏಕೆ ಸಿಕ್ಕಿತು ಎಂದು ಯೋಚಿಸಬೇಕಲ್ಲವೇ.