ನ್ಯೂಸ್

ಭಾರತದಲ್ಲಿ ಮಾಲಿನ್ಯ ಹೆಚ್ಚಳ: ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ ಉಲ್ಲೇಖ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಜಗತ್ತಿನ ಅತಿ ಹೆಚ್ಚು ಮಾಲಿನ್ಯ ನಗರಗಳ ಪೈಕಿ ಮೂರನೇ ಎರಡರಷ್ಟು ನಗರಗಳು ಭಾರತದಲ್ಲೇ ಇವೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ. ಮಾಲಿನ್ಯ ನಿಯಂತ್ರಣದಲ್ಲಿ ಭಾರತ ತುಂಬಾ ಹಿಂದೆ ಬಿದ್ದಿದೆ. ಜಗತ್ತಿನ ಅತಿಹೆಚ್ಚು ಹೊಂಜು (ಹೊಗೆ-ಮಂಜು) ಮಾಲಿನ್ಯ ಹೊಂದಿರುವ 20 ನಗರಗಳ ಪಟ್ಟಿಯಲ್ಲಿ 14 ನಗರಗಳು ಭಾರತದಲ್ಲೇ ಇವೆ.

ಜನನಿಬಿಡ ನಗರಗಳು, ವಾಹನಗಳಿಂದ ಹೊಗೆ ಉಗುಳುವಿಕೆ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳು ಭಾರತ, ಚೀನಾ ಮತ್ತು ಏಷ್ಯಾದ ನಗರಗಳು ಕಲುಷಿತಗೊಳ್ಳಲು ಪ್ರಮುಖ ಕಾರಣವಾಗಿವೆ ಎಂದು 2019ರ ವಿಶ್ವ ವಾಯು ಗುಣಮಟ್ಟ ವರದಿ ಹೇಳಿದೆ. ಕೃಷಿ ತ್ಯಾಜ್ಯ ಸುಡುವಿಕೆಯೂ ಒಂದು ಕಾರಣವಾಗಿದೆ. ಬೀಜಿಂಗ್ ಸೇರಿ ಚೀನಾದ ಅನೇಕ ನಗರಗಳು ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸುಧಾರಣೆ ದಾಖಲಿಸಿವೆ. ಆದರೆ ಭಾರತದ ಮಹಾ ನಗರಗಳು ಈ ವಿಚಾರದಲ್ಲಿ ವಿಫಲವಾಗಿವೆ ಎಂದು ವರದಿ ಹೇಳಿದೆ.

ಒಂದು ಕಾಲದಲ್ಲಿ ವಿಷಮಯ ವಾತಾವರಣಕ್ಕೆ ಕುಖ್ಯಾತವಾಗಿದ್ದ ಬೀಜಿಂಗ್​ನ ವಾಯು ಗುಣಮಟ್ಟ ಈಗ ಗಣನೀಯವಾಗಿ ಸುಧಾರಿಸಿದೆ. ಆದರೆ ನವದೆಹಲಿಯ ವಾಯು ಗುಣಮಟ್ಟ ಇಳಿಕೆಯಾಗಿದೆ. ದೆಹಲಿಯ ಉಪನಗರವಾದ ಗಾಜಿಯಾಬಾದ್ ಮಾಲಿನ್ಯ ವಿಚಾರದಲ್ಲಿ ಅತ್ಯಂತ ಕೆಟ್ಟ ರ್ಯಾಂಕ್ ಹೊಂದಿದೆ.

ಚೀನಾದಲ್ಲಿ ಪರಿಸ್ಥಿತಿ ಸುಧಾರಿಸಿರುವುದಕ್ಕೆ ಅಲ್ಲಿನ ಸರ್ಕಾರದ ಇಚ್ಛಾಶಕ್ತಿ ಹಾಗೂ ಜನರ ಭಾಗವಹಿಸುವಿಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. ಕಲುಷಿತ ಗಾಳಿ ಸೇವನೆಯಿಂದ ಜಗತ್ತಿನಾದ್ಯಂತ ಪ್ರತಿ ವರ್ಷ 70 ಲಕ್ಷ ಜನರು ಸಾಯುತ್ತಾರೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜು. ವಾಯು ಮಾಲಿನ್ಯದಿಂದ ಪ್ರತಿವರ್ಷ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್ ನಷ್ಟವಾಗುತ್ತದೆ ಎಂಬುದು ವಿಶ್ವ ಬ್ಯಾಂಕ್ ಲೆಕ್ಕಾಚಾರ.