ನ್ಯೂಸ್

ಲಾಕ್​ಡೌನ್ ವೇಳೆ ಹೆಚ್ಚಾಯ್ತು ಸೈಬರ್ ಕ್ರೈಂ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಮಾಡಿದ ಕಾರಣಕ್ಕೆ ಸಾಮಾನ್ಯ ಅಪರಾಧ ಪ್ರಕರಣಗಳಲ್ಲಿ ಶೇ.22 ಕುಸಿತ ಕಂಡá-ಬಂದಿದ್ದರೂ, ಆನ್​ಲೈನ್ ಮೂಲಕ ಜನರನ್ನು ವಂಚಿಸುವ ಸೈಬರ್ ಅಪರಾಧ ಮಾತ್ರ ಶೇ.60 ಏರಿಕೆ ಕಂಡಿದೆ.

ಮೊದಲಿಗಿಂತಲೂ ಹೆಚ್ಚು ಸಮಯ ಜನರು ಹೆಚ್ಚಾಗಿ ಆನ್​ಲೈನ್ ಮೊರೆ ಹೋಗಿದ್ದನ್ನೇ ಮೋಸಗಾರರು ಬಳಸಿಕೊಂಡು ವಂಚಿಸುವ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ರಾಜ್ಯ ಅಪರಾಧ ದಾಖಲಾತಿ ವಿಭಾಗ (ಎಸ್​ಸಿಆರ್​ಬಿ) ಅಂಕಿ ಅಂಶಗಳು ಪುಷ್ಟಿ ನೀಡಿವೆ.

ಕೇಂದ್ರ ಸರ್ಕಾರ ಮೊದಲು ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಣೆ ಮಾಡಿತ್ತು. ನಂತರ ಮಾ. 25ರಿಂದ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ. ಪ್ರತಿಯೊಬ್ಬರೂ ಲಕ್ಷ್ಮಣರೇಖೆ ಎಳೆದುಕೊಂಡು ಗೃಹಬಂಧನದಲ್ಲಿ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ಕೊಟ್ಟಿದ್ದರು. ಜನರೂ ಪಾಲಿಸಿದ್ದರು. ಮನೆಬಿಟ್ಟು ಜನ ಹೊರಗೆ ಬಾರದೆ ಇದ್ದರೂ ಅಪರಾಧಗಳು ಮಾತ್ರ ಸಂಪೂರ್ಣ ಹತೋಟಿಗೆ ಬಂದಿಲ್ಲ ಎಂಬುದು ಮಾ.12ರಿಂದ ಏ.13ರವರೆಗೆ ಸಂಗ್ರಹಿಸಿದ ಅಂಕಿ-ಅಂಶದ ಆಧಾರದಲ್ಲಿ ಏ.28ರಂದು ಎಸ್​ಸಿಆರ್​ಬಿ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗವಾಗಿದೆ. ರಾಜ್ಯಾದ್ಯಂತ ಮಾರ್ಚ್​ನಲ್ಲಿ 116 ಕೊಲೆ, 15 ಡಕಾಯಿತಿ, 56 ಸರಗಳವು, 94 ದರೋಡೆ ಪ್ರಕರಣಗಳು ದಾಖಲಾಗಿವೆ.ಲಾಕ್​ಡೌನ್ ಅವಧಿಯಲ್ಲಿ 93 ಕೊಲೆ, 13 ಡಕಾಯಿತಿ, 73 ದರೋಡೆ, 31 ಸರಗಳವು ಪ್ರಕರಣಗಳು ದಾಖಲಾಗಿವೆ. ಭೂ ವ್ಯಾಜ್ಯ, ಆಸ್ತಿ ವಿಚಾರಕ್ಕೆ ನಡೆದ ಕೊಲೆ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ.

ದಿಗ್ಬಂಧನ ಅವಧಿಯಲ್ಲಿ 1,042 ವಂಚನೆ ಪ್ರಕರಣ

ಲಾಕ್​ಡೌನ್ ಅವಧಿಯ ತಿಂಗಳಾದ ಏಪ್ರಿಲ್​ನಲ್ಲಿ 1,042 ಸೈಬರ್ ಕ್ರೖೆಂಗಳು ವರದಿಯಾಗಿವೆ. ಮಾರ್ಚ್ ಅವಧಿಯಲ್ಲಿ ಈ ಸಂಖ್ಯೆ 661 ಆಗಿತ್ತು. ಲಾಕ್​ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರದಿಂದ ಖಾತೆಗೆ ಹಣ ಹಾಕಲಾಗುತ್ತದೆ, ಉಚಿತವಾಗಿ ಮೊಬೈಲ್ ಡೇಟಾ ರೀಚಾರ್ಜ್ ಮಾಡಲಾಗುತ್ತದೆ ಎಂಬುದು ಸೇರಿ ಕರೊನಾ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಆರಂಭಿಸಿರುವ ಪಿಎಂ ಕೇರ್ಸ್ ನಿಧಿಗೆ ಹಣ ನೀಡುವ ರೂಪದಲ್ಲಿ ವಾಟ್ಸ್​ಆಪ್ ಮೂಲಕ ಮೊಬೈಲ್​ಗಳಲ್ಲಿ ಅನೇಕ ನಕಲಿ ಲಿಂಕ್​ಗಳು ಹರಿದಾಡುತ್ತಿವೆ. ಈ ಲಿಂಕ್​ಗಳನ್ನು ಕ್ಲಿಕ್ಕಿಸಿ ಬ್ಯಾಂಕ್ ಖಾತೆ ವಿವರ ನೀಡುವುದು, ಮೊಬೈಲ್ ಸ್ಟೋರೇಜ್ ಪ್ರವೇಶಕ್ಕೆ ಅನುಮತಿ ನೀಡಿ ಗುಪ್ತಮಾಹಿತಿ ಕದಿಯಲು ಅವಕಾಶ ನೀಡುವಂತಹ ಅನೇಕ ತಪು್ಪಗಳಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾಋಎ.

1,287 ಪ್ರಕರಣ ಏರಿಕೆ

ಲಾಕ್​ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ವಿಪತ್ತು ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ 1,287 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾರ್ಚ್ ನಲ್ಲಿ 3,499 ಪ್ರಕರಣ, ಏಪ್ರಿಲ್​ನಲ್ಲಿ 4,786 ಪ್ರಕರಣ ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹ್ಯಾಕರ್​ಗಳಿಂದ ರ್ಯಾನ್​ಸಮ್ವೇರ್ ದಾಳಿ

ಬೆಂಗಳೂರು: ಕರೊನಾ ಅಟ್ಟಹಾಸದಿಂದ ಇಡೀ ವಿಶ್ವವೇ ನಲುಗುತ್ತಿದೆ. ಈ ಪರಿಸ್ಥಿತಿಯಲ್ಲಿ ಖಾಸಗಿ ಕಂಪನಿ ನೌಕರರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವುದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಹ್ಯಾಕರ್​ಗಳು ರ್ಯಾನ್​ಸಮ್ವೇರ್ ದಾಳಿ ನಡೆಸುತ್ತಿದ್ದಾರೆ. ಹ್ಯಾಕರ್​ಗಳು ರಾಜಧಾನಿಯಲ್ಲಿ ವಕೀಲರೊಬ್ಬರ ಕಂಪ್ಯೂಟರ್ ಹ್ಯಾಕ್ ಮಾಡಿ ದತ್ತಾಂಶ ಕದ್ದಿದ್ದಾರೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಕಂಪನಿಯ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದ ವೇಳೆ ಕಂಪ್ಯೂಟರ್​ಗಳು ಹ್ಯಾಕ್ ಆಗಿವೆ. 500ಕ್ಕೂ ಹೆಚ್ಚು ಗ್ರಾಹಕರ ಲೆಕ್ಕ ಪರಿಶೋಧಕ ದತ್ತಾಂಶವನ್ನು ಹ್ಯಾಕರ್ಸ್ ವಶಕ್ಕೆ ತೆಗೆದುಕೊಂಡು, ಬಿಟ್​ಕಾಯಿನ್​ಗೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಪಶ್ಚಿಮ ವಿಭಾಗ ಸೈಬರ್ ಕ್ರೖೆಂ ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು?: ಗಾಂಧಿನಗರದ ನಿವಾಸಿ ವಕೀಲ ಬಾಬು ಲಾಲ್ ತೆರಿಗೆ ಸಲಹೆಗಾರರಾಗಿದ್ದು, ಗಾಂಧಿನಗರದಲ್ಲಿ ಕನ್ಸಲ್ಟೆನ್ಸಿ ಹೆಸರಿನಲ್ಲಿ ಕಂಪನಿಯನ್ನು ತೆರೆದಿದ್ದಾರೆ. 500ಕ್ಕೂ ಹೆಚ್ಚು ಗ್ರಾಹಕರಿಗೆ ಲೆಕ್ಕ ಪರಿಶೋಧಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮಾ. 24ರಂದು ಕಚೇರಿಯನ್ನು ಬಂದ್ ಮಾಡಿದ್ದರು. ಲಾಕ್​ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಏ.3ರಂದು ಕಚೇರಿ ಬಾಗಿಲು ತೆರೆದು ಪರಿಶೀಲಿಸಿದಾಗ, ಕಂಪ್ಯೂಟರ್​ಗಳು ವರ್ಕ್ ಆಗಿಲ್ಲ. ಬಹುದಿನಗಳ ನಂತರ ಆರಂಭಿಸುತ್ತಿರುವುದರಿಂದ ಹೀಗಾಗಿರಬಹುದು ಎಂದು ತಿಳಿದು ಸುಮ್ಮನಾಗಿದ್ದಾರೆ. ಎರಡು ದಿನಗಳ ನಂತರ ತಂತ್ರಜ್ಞರನ್ನು ಕರೆಸಿ ಪರಿಶೀಲಿಸಿದಾಗ, ಸೈಬರ್ ದಾಳಿ ನಡೆದಿರುವುದು ಕಂಡುಬಂದಿದೆ. ಕಚೇರಿಯಲ್ಲಿನ 2 ಕಂಪ್ಯೂಟರ್ ಹಾಗೂ ಡೇಟಾ ಸಂಗ್ರಹಿಸಿದ್ದ ಹಾರ್ಡ್ ಡಿಸ್ಕ್ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಕಂಪ್ಯೂಟರ್​ನ ಡೆಸ್ಕ್​ಟಾಪ್​ನಲ್ಲಿ, ‘ನಿಮ್ಮ ಎಲ್ಲ ಕಡತಗಳನ್ನು ಸ್ವಾಮ್ಯಕ್ಕೆ ತೆಗೆದುಕೊಂಡಿದ್ದೇವೆ. ಅದನ್ನು ಹಿಂಪಡೆಯಲು "bitcoin@email.tg ಹಾಗೂ ID As 8C34A7AA' ಬಳಸಿ’ ಎಂಬ ಸಂದೇಶವನ್ನು ಹಾಕಿದ್ದಾರೆ. ರ್ಯಾನ್​ಸಮ್ೇರ್ ದಾಳಿ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ದೂರಿನ ಅನ್ವಯ ಸೈಬರ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹ್ಯಾಕ್ ಆದರೆ ಏನಾಗುತ್ತದೆ?

ಇಮೇಲ್ ಮೂಲಕ ರ್ಯಾನ್​ಸಮ್ೇರ್ ಲಿಂಕ್ ಕಳುಹಿಸುತ್ತಾರೆ. ಕಂಪ್ಯೂಟರ್​ನಲ್ಲಿ ಆಂಟಿ ವೈರಸ್ ಸಾಫ್ಟ್​ವೇರ್ ಅಳವಡಿಸಿಕೊಳ್ಳದಿದ್ದರೆ ಹಾಗೂ ಪೈರಸಿ ಒಎಸ್ (ಆಪರೇಟಿಂಗ್ ಸಿಸ್ಟಮ್ ಬಳಸುತ್ತಿದ್ದರೆ ಕಂಪ್ಯೂಟರ್ ಹ್ಯಾಕ್ ಆಗುತ್ತದೆ. ಕಂಪನಿಯ ವ್ಯವಹಾರದ ಗಣಕೀಕೃತ ವ್ಯವಸ್ಥೆಯನ್ನು ಸೈಬರ್ ಕಳ್ಳರು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ದತ್ತಾಂಶವನ್ನು ವಶದಲ್ಲಿಟ್ಟುಕೊಳ್ಳುತ್ತಾರೆ. ಹಣ ಸುಲಿಗೆ ಮಾಡುವುದೇ ಹ್ಯಾಕರ್​ಗಳ ಉದ್ದೇಶ. ಬಿಟ್ ಕಾಯಿನ್​ಗಳ ರೂಪದಲ್ಲಿ ಹಣ ಪಡೆಯುತ್ತಾರೆ. ಈ ಪ್ರಕರಣದಲ್ಲಿ ಕಂಪ್ಯೂಟರ್​ನ ಡೆಸ್ಕ್​ಟಾಪ್ ಮೇಲೆ ಇಮೇಲ್ ಐಡಿ bitcoin@email.tg ಎಂದು ಹರಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಗೃಹ ಇಲಾಖೆ ಸೂಚಿಸಿದ್ದ ಸಲಹೆ

  • ನವೀಕೃತ ಆಪರೇಟಿಂಗ್ ಸಿಸ್ಟಮ್ ಹಾಗೂ ಆಂಟಿ ವೈರಸ್ ಸಾಫ್ಟ್​ವೇರ್ ಬಳಸಬೇಕು.
  • ಅನಾಮಿಕ ಇಮೇಲ್​ಗಳ ಲಿಂಕ್ ಪರಿಶೀಲಿಸಿಕೊಳ್ಳಬೇಕಾದುದು ಅತ್ಯಗತ್ಯ.
  • ಆನ್​ಲೈನ್ ಡಿವೈಸ್​ಗಳಿಗೆ ಹಾಕುವ ಪಾಸ್​ವರ್ಡ್ ಕಠಿಣವಾಗಿರಬೇಕು.
  • ನೌಕರರ ಜತೆ ಮಾಡುವ ವಿಡಿಯೋ ಕಾನ್ಪರೆನ್ಸ್ ಮಾಹಿತಿಗಳು ಗೌಪ್ಯವಾಗಿರಲಿ.

| ಗೋವಿಂದರಾಜು ಚಿನ್ನಕುರ್ಚಿ