ಗ್ರಾಪಂ ನೌಕರರ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಸಾಗರದಲ್ಲಿ ಮೆರವಣಿಗೆ ನಡೆಸಲಾಯಿತು. ನಾಗೇಶ್ ಕೆ. ವಾಲೆ, ಗುತ್ಯಪ್ಪ, ನಾಗರಾಜ್, ಷಣ್ಮುಖಪ್ಪ ಇತರರಿದ್ದರು. 
ನ್ಯೂಸ್

ಗ್ರಾಪಂ ನೌಕರರ ಸಂಬಳ ಹೆಚ್ಚಿಸಲಿ

ಸಾಗರ: ಕಾರ್ಮಿಕರ ಮಸೂದೆಯ ಕರಡು ಅಧಿಸೂಚನೆಯಲ್ಲಿ ಗ್ರಾಪಂ ನೌಕರರ ವೇತನವನ್ನು 31 ಸಾವಿರ ರೂ. ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ಸಾಗರ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಮೆರವಣಿಗೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಗ್ರಾಪಂ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಮ್ಮ ಕೆಲವು ಬೇಡಿಕೆಗಳ ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರೂ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾರ್ಮಿಕ ವಿರೋಧಿ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕು. ಪಿಂಚಣಿ, ಸೇವಾ ಹಿರಿತನ ಭತ್ಯೆ ಹೆಚ್ಚಳ ಮಾಡಬೇಕು. ಪಂಚಾಯಿತಿಗೊಂದು ಎಸ್‌ಡಿಎ, ಡಿಇಒ ಹುದ್ದೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಪಂ ನೌಕರರಿಗೆ ಆರೋಗ್ಯ ವಿಮೆ ಕಲ್ಪಿಸಬೇಕು. ಸ್ವಚ್ಛವಾಹಿನಿಯರ ಒಡಂಬಡಿಕೆ ರದ್ದು ಮಾಡಿ, ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸ ನೀಡುವ ಜತೆಗೆ 7,500 ರೂ. ಗೌರವಧನ ನೀಡಬೇಕು. ಸಿಂಗಲ್ ಚಾಲಕರನ್ನು ಪರಿಗಣಿಸಿ 15 ಸಾವಿರ ರೂ. ಗೌರವಧನ ನೀಡಿ ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ನಾಗೇಶ್ ಕೆ. ವಾಲೆ, ಕಾರ್ಯದರ್ಶಿ ಗುತ್ಯಪ್ಪ, ಪ್ರಮುಖರಾದ ನಾಗರಾಜ್, ಷಣ್ಮುಖಪ್ಪ, ಶಿವಕುಮಾರ್, ಶ್ರೀಧರ್, ಸುದೀಪ್, ಅಣ್ಣಪ್ಪ, ಗಣಪತಿ, ಮಂಜಪ್ಪ ಇತರರಿದ್ದರು.