ಶಿಕಾರಿಪುರ: ನಮ್ಮ ಜೀವನದಲ್ಲಿ ಆಯಸ್ಸು ಸಾರ್ಥಕ್ಯದಿಂದ ಕೂಡಿರಬೇಕು. ವರ್ಷಗಳನ್ನು ವ್ಯರ್ಥವಾಗಿ ಕಳೆಯಬಾರದು. ಸಂಸ್ಕೃತಿ, ಸಂಸ್ಕಾರಗಳ ಜತೆಗೆ ನಮ್ಮ ಬದುಕು ಸಾಗಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೋಡಿಹಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಸದ್ವಿಚಾರಗಳಿಂದ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ. ನಾವು ಉಸಿರಿರುವವರೆಗೆ ಆನಂದಮಯ ಜೀವನ ನಡೆಸಬೇಕು. ಪ್ರತಿ ಕ್ಷಣವೂ ಸಂತಸವಾಗಿರಬೇಕು ಎಂದರು.
ಜಗತ್ತಿನಲ್ಲಿ ಮಾತೆಗಿಂತ ದೊಡ್ಡದಾದ ಜೀವವಿಲ್ಲ. ಮಗುವಿನ ಮೊದಲ ಗುರುವೇ ತಾಯಿ. ಸಂಬಂಧಗಳನ್ನು ಪರಿಚಯಿಸಿ ಕರುಳಬಳ್ಳಿ ಸಂಬಂಧ ಬೆಸೆಯುವುದು ತಾಯಿ. ಅಮ್ಮ ಎಂಬ ಶಬ್ದವೇ ವಿಸ್ಮಯಗಳ ಆಗರ. ಅವಳು ಕೊಟ್ಟ ಮಾತು ಅವಳು ಕೈಹಿಡಿದು ನಡೆಸಿದ ಹೆಜ್ಜೆಗಳೇ ಇಂದು ನಮ್ಮನ್ನು ವ್ಯಕ್ತಿಗಳನ್ನಾಗಿ ರೂಪಿಸಿವೆ. ಅಮ್ಮನೆಂಬುದು ಅದ್ಭುತ ಶಕ್ತಿ. ಜಗತ್ತಿನಲ್ಲಿ ನಾವು ತೀರಿಸಲಾಗದ ಒಂದೇ ಒಂದು ಋಣ ಎಂದರೆ ಅದು ತಾಯಿಯ ಋಣ. ಅಮ್ಮ ಜತೆಗಿದ್ದರೆ ಸಪ್ತಸಾಗರಗಳು ಒಂದೆಡೆ ಸೇರಿದಂತೆ ಎಂದು ತಿಳಿಸಿದರು.
ವೃದ್ಧಾಶ್ರಮಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ಹಿರಿಯ ಜೀವಗಳನ್ನು ಕಂಡಾಗಲೆಲ್ಲ ಮನಸ್ಸು ಹಿಂಡಿದಂತಾಗುತ್ತದೆ. ಕಾಲಿಗೆ ಚಪ್ಪಲಿಯಿಲ್ಲದೆ ಹೊಟ್ಟೆಬಟ್ಟೆ ಕಟ್ಟಿ ನಿಮ್ಮನ್ನು ಸಾಕಿ ವಿದ್ಯಾವಂತರು, ಉದ್ಯೋಗಿಗಳನ್ನಾಗಿ ಮಾಡಿದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಠ ಬೆಳೆದಿದೆ. ಇದು ನಿಲ್ಲಬೇಕು. ಮಕ್ಕಳು ಯಾವುದೇ ಉದ್ಯೋಗ ವ್ಯವಹಾರ ಮಾಡಲಿ. ಅದರಲ್ಲಿ ತಂದೆ, ತಾಯಿಗಳಿಗೆ ಜೀವನಾಂಶ ಕೊಡುವ, ಅವರನ್ನು ಕಾಪಾಡುವ ಕಾನೂನು ತರಬೇಕು ಎಂದು ಅಭಿಪ್ರಾಯಪಟ್ಟರು.
ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಸದಾ ಗುರುವಿನ ಮಾರ್ಗದರ್ಶನದಲ್ಲಿಯೇ ಬದುಕು ಕಟ್ಟಿಕೊಂಡ ಮೃತ್ಯುಂಜಯ ನಾಯಕ್ ಕುಟುಂಬವನ್ನು ಅಡಿಪಾಯದಿಂದಲೇ ಆಚಾರ, ವಿಚಾರ, ಮಠ, ಮಂದಿರ, ಗುರುಗಳ ಮೇಲೆ ಭಕ್ತಿಮೂಡಿಸಿ ಬೆಳೆಸಿದವರು ಕುಸುಮಮ್ಮ ಎಂದರು.
ಮಳೆ ಹಿರೇಮಠದ ಕಿರಿಯ ಅಭಿನವ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಕೋಡಿಹಳ್ಳಿ ಮೃತ್ಯುಂಜಯ ನಾಯಕ್, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ವಕೀಲ ಹಾಲಪ್ಪ ಗೌಡ, ಶಿವಾನಂದ ಗೌಡ ಬೆಳಂದೂರ್ ಇತರರಿದ್ದರು.