ನ್ಯೂಸ್

ಹತ್ತು ವರ್ಷದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳ

ಭಾರತದ ಬಿಲಿಯನೇರ್​ಗಳ ಸಂಪತ್ತು 10 ವರ್ಷದಲ್ಲಿ 3 ಪಟ್ಟು ಏರಿಕೆ | ವಿಶ್ವದಲ್ಲಿ 3ನೇ ಸ್ಥಾನ

ನವದೆಹಲಿ: ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು ಮೂರು ಪಟ್ಟು ಏರಿಕೆಗೊಂಡಿದೆ. ಕೋವಿಡ್ ಮಹಾಮಾರಿ, ಮಾರುಕಟ್ಟೆ ಕುಸಿತದ ನಡುವೆಯೂ ದೇಶದ ಬಿಲಿಯನೇರ್​ಗಳ ಸಂಪತ್ತು ಹೆಚ್ಚಿದೆ. ಭಾರತೀಯ ಬಿಲಿಯನೇರ್​ಗಳ ಸಂಖ್ಯೆಯು ಕಳೆದ 10 ವರ್ಷಗಳಲ್ಲಿ 83ರಿಂದ 185ಕ್ಕೆ ಅಂದರೆ 123ರಷ್ಟು ಹೆಚ್ಚಾಗಿದೆ. ಆದರೆ ಅವರ ಸಂಪತ್ತು ಶೇ.263ರಷ್ಟು ಏರಿಕೆಯಾಗಿ 77 ಲಕ್ಷ ಕೋಟಿ ರೂ.ನಷ್ಟಿದೆ.

ಬಿಲಿಯನೇರ್​ಗಳ ಸಂಪತ್ತಿನ ವಿಷಯದಲ್ಲಿ ಭಾರತವು ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಮಾತ್ರ ಭಾರತಕ್ಕಿಂತ ಮುಂದಿವೆ. ಯುಬಿಎಸ್ ಆಂಬೀಷನ್ ವರದಿಯ ಪ್ರಕಾರ, ಭಾರತ ಅಲ್ಲದೆ ವಿಶ್ವದ ಹಲವು ದೇಶಗಳ ಬಿಲಿಯನೇರ್​ಗಳ ಸಂಪತ್ತು ಕೂಡ ಏರಿಕೆಯಾಗಿದೆ. ಚೀನೀ ಶತಕೋಟ್ಯಧಿಪತಿಗಳ ಸಂಪತ್ತು 2015 ಮತ್ತು 2020ರ ನಡುವೆ ವಾರ್ಷಿಕವಾಗಿ 20%ರಷ್ಟು ಹೆಚ್ಚಾಗಿದೆ. ಆದರೆ ಅದರ ನಂತರ ಅವರ ಸಂಪತ್ತು ಪ್ರತಿ ವರ್ಷ ಸುಮಾರು 5%ರಷ್ಟು ಕಡಿಮೆಯಾಗಿದೆ.

ಅಮೆರಿಕದಲ್ಲೂ ವೃದ್ಧಿ

ಅಮೆರಿಕದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು 5 ವರ್ಷಗಳಲ್ಲಿ ಶೇ.58.5ರಷ್ಟು ಏರಿಕೆಯಾಗಿ 516 ಲಕ್ಷ ಕೋಟಿ ರೂ. ಮುಟ್ಟಿದೆ. ಆದರೆ 2015 ಮತ್ತು 2020ರ ನಡುವೆ ಇದು 52.7%ರಷ್ಟು ಏರಿಕೆಯಾಗಿ ಸುಮಾರು 322 ಲಕ್ಷ ಕೋಟಿ ರೂ. ದಾಖಲಾಗಿದೆ. ಪಶ್ಚಿಮ ಯುರೋಪ್​ದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು 29%ರಷ್ಟು ಹೆಚ್ಚಾಗಿದೆ. ವಿಶ್ವದಲ್ಲಿ ಟೆಕ್ ಕ್ಷೇತ್ರದಿಂದ ಅತಿ ಹೆಚ್ಚು ಬಿಲಿಯನೇರ್​ಗಳು ಹೊರಹೊಮ್ಮುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರ ಸಂಪತ್ತು 67 ಸಾವಿರ ಕೋಟಿಯಿಂದ 203 ಲಕ್ಷ ಕೋಟಿ ರೂ.ಗೆ ಅಂದರೆ 3 ಪಟ್ಟು ಹೆಚ್ಚಾಗಿದೆ.

ಕೈಗಾರಿಕಾ ಬಿಲಿಯನೇರ್​ಗಳು ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ 45 ಸಾವಿರ ಕೋಟಿ ರೂ.ಯಿಂದ 110 ಲಕ್ಷ ಕೋಟಿಗೆ ಏರಿಕೆಯಾಗಿದೆ. ಯುರೋಪಿನ ಪರಿಸ್ಥಿತಿ ಭಾರತ, ಚೀನಾ ಮತ್ತು ಅಮೆರಿಕಕ್ಕಿಂತ ಭಿನ್ನವಾಗಿತ್ತು. 2015 ಮತ್ತು 2020ರ ನಡುವೆ ಪಶ್ಚಿಮ ಯುರೋಪ್​ನ ಬಿಲಿಯನೇರ್​ಗಳ ಸಂಪತ್ತು ಶೇ.44ರಷ್ಟು ಏರಿಕೆಯಾಗಿ 178 ಲಕ್ಷ ಕೋಟಿ ರೂ.ಗೆ ತಲುಪಿದೆ. ಆದರೆ 2020-2024ರ ನಡುವೆ ಇದು ಕೇವಲ 29%ರಷ್ಟು ಏರಿಕೆಯಾಗಿ 228.6 ಲಕ್ಷ ಕೋಟಿ ರೂ. ಆಗಿದೆ.