ನ್ಯೂಸ್

ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣ ಶೇ.3-7.5ಕ್ಕೆ ಹೆಚ್ಚಳ: ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಣೆ

ದಾವಣಗೆರೆ: ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣವನ್ನು ಶೇ.3-ಶೇ.7.5ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಬದ್ಧವಿದೆ. ನ್ಯಾ. ನಾಗಮೋಹನದಾಸ್ ಸಮಿತಿ ವರದಿ ಬಂದ ತಕ್ಷಣ ಕಾರ್ಯರೂಪಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಾಲ್ಮೀಕಿ ಜಾತ್ರೆಯಲ್ಲಿ ಘೊಷಿಸಿದರು.

ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಭಾನುವಾರ ನಡೆದ ಜನಜಾಗೃತಿ ಸಮಾವೇಶದಲ್ಲಿ ನೆರೆದಿದ್ದ ಜನರ ಹಷೋದ್ಘಾರದ ನಡುವೆ ಸಿಎಂ ಮೀಸಲು ಘೊಷಣೆ ಮೊಳಗಿಸಿದರು. ಸಮಾಜದ 40 ವರ್ಷಗಳ ಬೇಡಿಕೆಗೆ ಸ್ಪಂದಿಸುವುದಾಗಿ ತುಂಬಿದ ಸಭೆಯಲ್ಲಿ ಭರವಸೆ ನೀಡಿದ ಸಿಎಂಗೆ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಧನ್ಯವಾದ ಸಲ್ಲಿಸಿದರು.

ಆದಷ್ಟು ಬೇಗ ವರದಿ ನೀಡುವಂತೆ ಸರ್ಕಾರವು ಸಮಿತಿಗೆ ಲಿಖಿತ ಮನವಿ ಸಲ್ಲಿಸಿತ್ತು. ಕಾಲಮಿತಿ ಒಳಗೆ ವರದಿ ಸಲ್ಲಿಸುವುದಾಗಿ ನ್ಯಾ.ನಾಗಮೋಹನದಾಸ್ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ. ಆ ಪತ್ರವನ್ನು ಸ್ವಾಮೀಜಿಗೆ ನೀಡಿದ್ದಾಗಿ ತಿಳಿಸಿದರು. ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವುದಾಗಿ ಇದೇ ಸಂದರ್ಭದಲ್ಲಿ ಸಮುದಾಯಕ್ಕೆ ಭರವಸೆ ನೀಡಿದರು. ಮುಂದಿನ ಮೂರು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಏಳಿಗೆಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಇದಕ್ಕೂ ಮುಂಚೆ ನಡೆದ ಧರ್ಮ ಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಶೇ.10 ಮೀಸಲು ಹೆಚ್ಚಿಸಿದೆ. ರಾಜ್ಯದಲ್ಲೂ ವಾಲ್ಮೀಕಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಕೊಡುವಂತೆ ಸರ್ಕಾರ ರಚಿಸಿರುವ ಸಮಿತಿಗೆ ಆಗ್ರಹಿಸಿದರು.

ಮುಖಾಮುಖಿಯಾಗದ ನಾಯಕರು: ಜಾತ್ರೆಗೆ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಪ್ರತ್ಯೇಕ ಸಮಯದಲ್ಲಿ ಬಂದು ಹೋದರು. ಆದರೆ ಮೂವರೂ ಮುಖಾಮುಖಿ ಆಗಲಿಲ್ಲ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹಸಚಿವ ಬಸವರಾಜ ಬೊಮ್ಮಾಯಿ, ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಉಪಸ್ಥಿತರಿದ್ದರು.

ಎದ್ದುಕಂಡ ಶ್ರೀರಾಮುಲು ಗೈರು

ವಾಲ್ಮೀಕಿ ಜಾತ್ರೆಯಲ್ಲಿ ಸಚಿವ ಬಿ. ಶ್ರೀರಾಮುಲು ಗೈರುಹಾಜರಿ ಎದ್ದು ಕಂಡಿತು. ಜಾತ್ರಾ ಸಮಿತಿ ಅಧ್ಯಕ್ಷರೂ ಆಗಿರುವ ಶ್ರೀರಾಮುಲು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುಣ್ಯಾನಂದಪುರಿ ಶ್ರೀಗಳ ಪ್ರತಿಮೆ ಅನಾವರಣ ಮಾಡಿದಾಗ ಅವರೊಂದಿಗೆ ಶ್ರೀರಾಮುಲು ಇದ್ದರು. ನಂತರ ನಡೆದ ಧರ್ಮಸಭೆಗೆ ಸಿದ್ದರಾಮಯ್ಯ ಬಂದಾಗಲೂ ವೇದಿಕೆಯಲ್ಲಿದ್ದರು.ಆದರೆ, ಸಿಎಂ ಯಡಿಯೂರಪ್ಪ ವೇದಿಕೆಗೆ ಬಂದಾಗ ಮಾತ್ರ ಶ್ರೀರಾಮುಲು ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಮೋಹನದಾಸ್ ನೇತೃತ್ವದ ಸಮಿತಿ ರಚಿಸಲಾಗಿದೆ. ಸರ್ಕಾರ ಆದಷ್ಟು ಬೇಗ ಸಮಿತಿ ವರದಿ ಪಡೆದು ಈ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು. | ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ