ಸಾಗರ: ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘಟನೆಗಳು ಯುವಜನರಲ್ಲಿ ಸಾಂಘಿಕ ಶಕ್ತಿ ಹೆಚ್ಚಿಸುತ್ತವೆ. ಅಲ್ಲದೆ ಸಾಮಾಜಿಕ ಕಾರ್ಯಗಳು ನಮ್ಮ ಬದ್ಧತೆಯನ್ನು ಪ್ರತಿಪಾದಿಸುತ್ತವೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ನಗರದಲ್ಲಿ ಭಾನುವಾರ ನೆಹರು ನಗರ ಯುವಜನ ಸಂಘ, ಬಾಲ ಯುವಕ ಸಂಘ, ಜಿಲ್ಲಾ ಆರೋಗ್ಯ ಇಲಾಖೆ, ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಮತ್ತು ಪೊರೆ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಗಣೇಶೋತ್ಸವ ಜತೆಗೆ ಸಾಮಾಜಿಕ ಕೆಲಸಗಳನ್ನು ಸಂಘಟನೆಗಳು ಮಾಡಿಕೊಂಡು ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಇದನ್ನು ಎಲ್ಲ ಸಂಘಟನೆಗಳು ಮುಂದುವರಿಸಬೇಕು. ಕಣ್ಣು ಮನುಷ್ಯನ ಮುಖ್ಯ ಅಂಗಗಳಲ್ಲಿ ಒಂದು. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ ಮಾತನಾಡಿ, ಗಣಪತಿ ಉತ್ಸವ ಯುವಕರನ್ನು ಸನ್ಮಾರ್ಗದತ್ತ ಕರೆದೊಯ್ಯುತ್ತದೆ. ಇಂತಹ ಕಾರ್ಯಕ್ರಮ ಮಾಡಬೇಕಾದರೆ ದಾನಿಗಳ ಸಹಕಾರ ಅಗತ್ಯ. ನೆಹರು ನಗರದ ಯುವಜನ ಸಂಘ 28 ವರ್ಷಗಳಿಂದ ಉತ್ಸವದ ಜತೆಗೆ ಸಾಮಾಜಿಕ ಕಾರ್ಯ ನಡೆಸಿಕೊಂಡು ಬರುತ್ತಿದೆ. ಮೂರ‌್ನಾಲ್ಕು ವರ್ಷಗಳಿಂದ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಶರತ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ಡಾ. ಶೀತಲ್, ನಾಗರಾಜ್, ಸತೀಶ್, ದೇವರಾಜ್ ಇತರರಿದ್ದರು.