ನ್ಯೂಸ್

ಮೆರಿಟ್ ವಿದ್ಯಾರ್ಥಿಗಳಿಗೆ ಸಾಲದ ಮಿತಿ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್ ಅಹಮದ್

ಬೆಂಗಳೂರು: ಎಂಬಿಬಿಎಸ್ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ಸಮುದಾಯದ ಮೆರಿಟ್ ವಿದ್ಯಾರ್ಥಿಗಳಿಗೆ ಸಾಲದ ಪ್ರಮಾಣ 5 ಲಕ್ಷ ರೂ.ಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ( ಕೆಎಂಡಿಸಿ ) ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಕೆಎಂಡಿಸಿ ವತಿಯಿಂದ ಸರ್ಕಾರಿ ಕೋಟಾ ಅಡಿಯಲ್ಲಿ ಸೀಟು ಪಡೆಯುವ ಮೆರಿಟ್ ವಿದ್ಯಾರ್ಥಿಗಳಿಗೆ 3 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಅದನ್ನು 5 ಲಕ್ಷ ರೂ.ಗೆ ಏರಿಸಲಾಗುವುದು. ಇದರಿಂದಾಗಿ ಬಡ ಕುಟುಂಬಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.

ಅದೇ ರೀತಿ ವಿದೇಶದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವವರಿಗೆ ಪ್ರಸ್ತುತ 20 ಲಕ್ಷ ರೂ. ಶಿಕ್ಷಣ ಸಾಲ ನೀಡಲಾಗುತ್ತಿದೆ. ಈ ಮೊತ್ತವನ್ನು ಕೂಡ 30 ಲಕ್ಷ ರೂ. ಗೆ ಹೆಚ್ಚಿಸುವ ಚಿಂತನೆ ಇದೆ ಎಂದು ಹೇಳಿದರು.

ನಿಗಮದ ವತಿಯಿಂದ ಇಂದು ಎಂಟು ಯೋಜನೆಗೆ ಚಾಲನೆ ನೀಡಿದ್ದು, ಆ ಪೈಕಿ ಅರಿವು ಸೇರಿ ನಾಲ್ಕು ಹಳೇ ಯೋಜನೆ ಮತ್ತೆ ಆರಂಭಿಸಲಾಗಿದೆ. ನಾಲ್ಕು ಹೊಸ ಯೋಜನೆ ಪ್ರಾರಂಭಿಸಲಾಗುತ್ತಿದೆ. ನಿರುದ್ಯೋಗಿಗಳಿಗೆ ಕಾರು ಸೇರಿ ನಾಲ್ಕು ಚಕ್ರ ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ನೀಡುವ ಸ್ವಾವಲಂಬಿ, ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ಶ್ರಮಶಕ್ತಿ, ವಿಧವೆ, ವಿಚ್ಚೆಧಿತ, ಅವಿವಾಹಿತ ಮಹಿಳೆಯರಿಗೆ 50 ಸಾವಿರ ರೂ. ಸಾಲ ನೀಡುವ ಹಾಗೂ ವೃತ್ತಿ ಪ್ರೋತ್ಸಾಹ ಯೋಜನೆಗೆ ಚಾಲನೆ ನೀಡಲಾಯಿತು ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ, ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ಉಪಸ್ಥಿತರಿದ್ದರು.