ನ್ಯೂಸ್

ಸರ್ಕಾರಿ ನೌಕರರಿಗೆ ಮನೆ ನಿರ್ಮಾಣ ಮುಂಗಡ ಹೆಚ್ಚಳ

ಬೆಂಗಳೂರು: ಐಎಎಸ್ ಅಧಿಕಾರಿಗಳ ಜತೆಗೆ ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರು ಹೊಸದಾಗಿ ಮನೆ ನಿರ್ಮಾಣ ಅಥವಾ ಖರೀದಿಗೆ ನೀಡಲಾಗುತ್ತಿದ್ದ ಮುಂಗಡ ಮೊತ್ತದ ಮಿತಿಯನ್ನು ರಾಜ್ಯ ಸರ್ಕಾರ ಏರಿಸಿದೆ.

ಅಧಿಕಾರಿಗಳು, ಸಿಬ್ಬಂದಿ ವೇತನ ಸೇರಿ ಮರು ಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ಗರಿಷ್ಠ ಮುಂಗಡ ಮೊತ್ತವನ್ನು ನಿಗದಿಪಡಿಸಿ ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು) ಗುರುವಾರ ಆದೇಶ ಹೊರಡಿಸಿದೆ.

ಎ ದರ್ಜೆ ಗುಂಪಿನ ಅಧಿಕಾರಿಗಳಿಗೆ 70 ತಿಂಗಳ (ವೇತನ + ತುಟ್ಟಿ ಭತ್ಯೆ) ಗರಿಷ್ಠ ಮೊತ್ತ 65 ಲಕ್ಷ ರೂ. ಮಿತಿ, ಇತರ ಅಧಿಕಾರಿಗಳು ಹಾಗೂ ನೌಕರರಿಗೆ 40 ಲಕ್ಷ ರೂ.ಗಳ ಗರಿಷ್ಠ ಮೊತ್ತದ ಮಿತಿ ನಿಗದಿಪಡಿಸಲಾಗಿದೆ.

ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳು ಸಹ 70 ತಿಂಗಳ (ವೇತನ + ತುಟ್ಟಿ ಭತ್ಯೆ) ಗರಿಷ್ಠ 65 ಲಕ್ಷ ರೂ.ಗಳ ಮಿತಿಗೆ ಒಳಪಟ್ಟು ಮುಂಗಡ ಪಡೆಯಲು ಅರ್ಹರಾಗಿದ್ದಾರೆ.

ಗೃಹ ನಿರ್ಮಾಣ ಅಥವಾ ಖರೀದಿ ಮುಂಗಡದ ಮೇಲಿನ ಬಡ್ಡಿ ದರವು ವಾರ್ಷಿಕ ಶೇ.8.5ರ ಏಕರೂಪವಾಗಿ ನಿಗದಿ ಸೇರಿ ಆರು ನಿಬಂಧನೆ ವಿಧಿಸಿರುವುದನ್ನು ಆದೇಶದಲ್ಲಿ ವಿವರಿಸಲಾಗಿದೆ.