ನ್ಯೂಸ್

ಕಟ್ಟಡಗಳ ಎನ್​ಒಸಿ ದುಬಾರಿ; ವಸತಿ, ವಾಣಿಜ್ಯ ಕಟ್ಟಡಗಳ ನಿರಾಕ್ಷೇಪಣಾ ಪತ್ರಗಳ ಶುಲ್ಕ ಏರಿಕೆ

| ಕೀರ್ತಿನಾರಾಯಣ ಸಿ. 

ಬೆಂಗಳೂರು: ವಸತಿ, ವಾಣಿಜ್ಯ ಹಾಗೂ ಬಹುಪಯೋಗಿ ಕಟ್ಟಡಗಳ ಮಾಲೀಕರಿಗೆ ಬೆಲೆಏರಿಕೆ ಬಿಸಿ ತಟ್ಟಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕಾದ ನಿರಾಕ್ಷೇಪಣಾ ಪತ್ರದ (ಎನ್​ಒಸಿ) ಶುಲ್ಕವನ್ನು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಜು.15ರಿಂದಲೇ ಪರಿಷ್ಕೃತ ಶುಲ್ಕ ಜಾರಿಯಾಗಿದೆ.

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ಕಟ್ಟಡ ಕಾರ್ಯಾಚರಣೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಎನ್​ಒಸಿ ಪಡೆಯಲೇಬೇಕು. ಅದಕ್ಕಾಗಿ ನಿಗದಿತ ಶುಲ್ಕವಿದೆ. ಇಲಾಖೆಯ ತೆರಿಗೆಯೇತರ ಆದಾಯದ ದರಗಳನ್ನು ವೆಚ್ಚದ ಹಣದುಬ್ಬರ ಸೂಚ್ಯಂಕ (ಕಾಸ್ಟ್ ಇನ್​ಫ್ಲೇಶನ್ ಇಂಡೆಕ್ಸ್) ಪ್ರಕಾರ ಆರ್ಥಿಕ ಇಲಾಖೆ ಸಹಮತದೊಂದಿಗೆ ಈಗಾಗಲೇ ಚಾಲ್ತಿಯಲ್ಲಿರುವ ದರ ಪರಿಷ್ಕರಿಸಿರುವುದಾಗಿ ಸರ್ಕಾರ ಸಮರ್ಥಿಸಿಕೊಂಡಿದೆ. ಬಹುಮಹಡಿ ವಸತಿ ಕಟ್ಟಡಗಳಿಗೆ ಸದ್ಯ ಪ್ರತಿನಿರ್ವಿುತ ಪ್ರದೇಶದ (ಸೂಪರ್ ಬಿಲ್ಟ್ ಅಪ್ ಏರಿಯಾ) ಚದರ ಮೀಟರ್​ಗೆ 35 ರೂ. ಅಥವಾ 2.50 ಲಕ್ಷ ರೂ. (ಯಾವುದು ಹೆಚ್ಚಿರುತ್ತದೆ ಅದು ಪಾವತಿಸಬೇಕು) ಇತ್ತು.

ಪರಿಷ್ಕೃತ ದರವನ್ನು ಚದರ ಮೀಟರ್​ಗೆ 60 ರೂ. ಅಥವಾ 3 ಲಕ್ಷ ರೂ.ಗೆ ಏರಿಸಲಾಗಿದೆ. ಅಂದರೆ ಶೇಕಡಾವಾರು ಶೇ.71.42 ಜಾಸ್ತಿಯಾಗಿದೆ. 2 ವರ್ಷಕೊಮ್ಮೆ ಹೆಚ್ಚಿಸಲು ಪ್ರಸ್ತಾವನೆ: ಇದೇ ವೇಳೆ ಎನ್​ಒಸಿ ಶುಲ್ಕವನ್ನು ಪ್ರತಿ ಎರಡು ವರ್ಷಕೊಮ್ಮೆ ಹೆಚ್ಚಿಸಲು ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ಕಟ್ಟಡಗಳಿಗೆ 5000 ರೂ., ಹೋಟೆಲ್, ಆಸ್ಪತ್ರೆ, ಕಚೇರಿ, ಕೈಗಾರಿಕೆಗಳಿಗೆ 10 ಸಾವಿರ ರೂ. ಹಾಗೂ ಶೈಕ್ಷಣಿಕ ಕಟ್ಟಡಗಳಿಗೆ 1000 ರೂ. ಏರಿಸಬೇಕು ಎಂದು ಪರಿಷ್ಕೃತ ದರದ ಪ್ರಸ್ತಾವನೆ ರೂಪಿಸಲಾಗಿದೆ.

ಎಷ್ಟಿತ್ತು? ಎಷ್ಟಾಯ್ತು?

  • ಬಹುಮಹಡಿ ವಾಣಿಜ್ಯ ಕಟ್ಟಡ, ಬಹುಪಯೋಗಿ ಕಟ್ಟಡಕ್ಕೆ ಪ್ರಸ್ತುತ ಪ್ರತಿ ನಿರ್ವಿುತ ಪ್ರದೇಶದ (ಸೂಪರ್ ಬಿಲ್ಟ್ ಅಪ್ ಏರಿಯಾ) ಚದರ ಮೀಟರ್​ಗೆ
  • 60 ರೂ. ಅಥವಾ 5 ಲಕ್ಷ ರೂ. (ಯಾವುದು ಹೆಚ್ಚಿರುವುದೋ ಅದು ಅನ್ವಯ) ಇತ್ತು. ಅದನ್ನು ಚದರ ಮೀಟರ್​ಗೆ 80 ರೂ. ಅಥವಾ 6 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಶೇಕಡಾವಾರು ಶೇ.33 ಏರಿಕೆಯಾಗಿದೆ.

ಶೈಕ್ಷಣಿಕ ಕಟ್ಟಡಕ್ಕೆಷ್ಟು?

  • 1 ರಿಂದ 6.99 ಮೀಟರ್ ಎತ್ತರದ ಕಟ್ಟಡಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಪ್ರಸ್ತುತ 1000 ರೂ., ನಗರ ಪ್ರದೇಶದಲ್ಲಿ 5 ಸಾವಿರ ರೂ. ಇದೆ. ಅದನ್ನು ಕ್ರಮವಾಗಿ 1100 ರೂ.ಗೆ ಹಾಗೂ 5500 ರೂ.ಗೆ ಏರಿಸಲಾಗಿದೆ
  • 7 ರಿಂದ 20.99 ಮೀಟರ್ ಎತ್ತರದ ಕಟ್ಟಡಗಳಿಗೆ ಸದ್ಯ ಗ್ರಾಮಾಂತರದಲ್ಲಿ 5000 ರೂ. ಹಾಗೂ ನಗರ ಪ್ರದೇಶದಲ್ಲಿ 20 ಸಾವಿರ ರೂ. ಇದೆ. ಅದನ್ನು ಕ್ರಮವಾಗಿ 5500 ರೂ.ಗೆ ಹಾಗೂ 22 ಸಾವಿರ ರೂ.ಗೆ ಹೆಚ್ಚಿಸಲಾಗಿದೆ
  • 21 ಮೀಟರ್ ಮೇಲ್ಪಟ್ಟ ಎತ್ತರದ ಕಟ್ಟಡಗಳಿಗೆ ರಾಜ್ಯಾದ್ಯಂತ ಅನ್ವಯವಾಗುವಂತೆ ಸದ್ಯ ನಿರಾಕ್ಷೇಪಣಾ ಪತ್ರ ನೀಡಲು ಪ್ರತಿ ಚದರ ಮೀಟರ್​ಗೆ 60 ರೂ. ಇದ್ದು, ಅದನ್ನು 69 ರೂ.ಗೆ ಏರಿಕೆ ಮಾಡಲಾಗಿದೆ
  • ಅಗ್ನಿಶಾಮಕ ಇಲಾಖೆ ತೆರಿಗೆಯೇತರ ಆದಾಯ ದರ ಪರಿಷ್ಕರಣೆ
  • ಹೋಟೆಲ್, ಆಸ್ಪತ್ರೆ, ಕೈಗಾರಿಕಾ ಕಚೇರಿ ಸೇರಿ ಎಲ್ಲ ಕಟ್ಟಡಕ್ಕೆ ಅನ್ವಯ
  • ಹಣದುಬ್ಬರ ಸೂಚ್ಯಂಕ ಪ್ರಕಾರ ಪರಿಷ್ಕರಿಸಿರುವುದಾಗಿ ಸಮರ್ಥನೆ

ಸಲಹಾ ಪತ್ರದ ಶುಲ್ಕವೂ ಹೆಚ್ಚಳ

ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡಗಳಲ್ಲದ ಹೋಟೆಲ್, ಆಸ್ಪತ್ರೆ, ಕೈಗಾರಿಕಾ ಕಚೇರಿ, ಶಾಲಾ-ಕಾಲೇಜು ಹಾಗೂ ಶೈಕ್ಷಣಿಕ ಕಟ್ಟಡಗಳಲ್ಲಿ ಅಗ್ನಿಶಾಮಕ ವಿಧಾನಗಳ ಬಗ್ಗೆ ಸಲಹಾ ಪತ್ರ ನೀಡಲು ನಿಗದಿಯಾಗಿದ್ದ ಶುಲ್ಕವೂ ಪರಿಷ್ಕೃತಗೊಂಡಿದೆ. ಅದರಂತೆ ವಸತಿ ಕಟ್ಟಡಕ್ಕೆ ಸದ್ಯ -ಠಿ;50 ಸಾವಿರ ಇದ್ದು, ಅದನ್ನು -ಠಿ;55 ಸಾವಿರಕ್ಕೆ (ಶೇ.10) ಏರಿಸಲಾಗಿದೆ. ಹೋಟೆಲ್, ಆಸ್ಪತ್ರೆ, ಕೈಗಾರಿಕಾ ಕಚೇರಿಗೆ 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ. ಅಂದರೆ ಚಾಲ್ತಿಯಲ್ಲಿರುವುದಕ್ಕಿಂತ ಶೇ.100 ಜಾಸ್ತಿಯಾಗಿದೆ.