ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಜನ ಸಂದಣಿ ಮತ್ತು ಸಂಚಾರದ ಮೇಲೆ ಮತ್ತೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಮುಂಬೈ ಮತ್ತು ಪುಣೆ ನಗರಗಳಲ್ಲಿ ದಿನಕ್ಕೆ 600 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಇತ್ತೀಚೆಗೆ ರಾಜ್ಯದ ಮೂವರು ಸಚಿವರಿಗೆ ಕರೊನಾ ಸೋಂಕು ಕಂಡುಬಂದಿತ್ತು. ಇದೀಗ ಮತ್ತೊಬ್ಬ ಸಚಿವರು ಈ ಸಾಲಿಗೆ ಸೇರಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡ ಜಲಸಂಪನ್ಮೂಲ ಸಚಿವರೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ರಾಜ್ಯಾಧ್ಯಕ್ಷರೂ ಆದ ಜಯಂತ್ ಪಾಟೀಲ್ಗೆ ಕರೋನಾ ಸೋಂಕು ತಗುಲಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಪಾಟೀಲ್, ತಾವು ಸೂಕ್ತ ವೈದ್ಯಕೀಯ ಸಲಹೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಮುಂಚೆ ಎನ್ಸಿಪಿಯ ನಾಯಕರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಲು ಆಯೋಜಿಸಲಾಗಿದ್ದ 'ರಾಷ್ಟ್ರವಾದಿ ಸಂವಾದ್ ಯಾತ್ರಾ' ಅಂಗವಾಗಿ ಪಾಟೀಲ್ ರಾಜ್ಯದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದೀಗ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕಕ್ಕೆ ಬಂದ ಜನರಿಗೆ ರೋಗಲಕ್ಷಣಗಳ ಬಗ್ಗೆ ಗಮನ ವಹಿಸಿ, ಪ್ರತ್ಯೇಕವಾಗಿರುವಂತೆ ಕೋರಿದ್ದಾರೆ. "ನಾನು ಆರಾಮಾಗಿದ್ದೇನೆ" ಎಂದು ಟ್ವೀಟ್ ಮಾಡಿರುವ ಪಾಟೀಲ್, "ನನ್ನ ಕರ್ತವ್ಯಗಳನ್ನು ವೀಡಿಯೋ ಕಾನ್ಫರೆನ್ಸ್ ಮುಖಾಂತರ ಮುಂದುವರಿಸಲಿದ್ದೇನೆ" ಎಂದಿದ್ದಾರೆ.
ಈ ತಿಂಗಳಲ್ಲೇ ಮಹಾರಾಷ್ಟ್ರದ ಸಚಿವರಾದ ಅನಿಲ್ ದೇಶಮುಖ್, ಸತೇಜ್ ಪಾಟೀಲ್ ಮತ್ತು ರಾಜೇಂದ್ರ ಶಿಂಗ್ನೆ ಕರೊನಾ ಪಾಸಿಟೀವ್ ಆಗಿದ್ದರು. ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇಶಮುಖ್, ಫೆಬ್ರವರಿ 15 ರಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.(ಏಜೆನ್ಸೀಸ್)