ನ್ಯೂಸ್

ಮಕ್ಕಳಿಗೆ ನಾಯಿ ಕಡಿತ ಪ್ರಕರಣ ಹೆಚ್ಚಳ, ಸರ್ಕಾರದೊಂದಿಗೆ ಚರ್ಚಿಸಲಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನಾಯಿಗಳ ಕಡಿತದಿಂದ ಮಕ್ಕಳನ್ನು ರಕ್ಷಿಸುವ ವಿಚಾರವಾಗಿ ಗಮನ ಸೆಳೆಯಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ತಿಳಿಸಿದರು. 

ಜಿಲ್ಲಾಡಳಿತ ಭವನದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಕೈಗೊಂಡಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆರ್.ಟಿ.ಇ-2009, ಪೋಕ್ಸೋ -2012, ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಬಾಲನ್ಯಾಯ ಕಾಯ್ದೆಗಳ ಅನುಷ್ಠಾನ ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮ, ವಿವಿಧ ಯೋಜನೆಗಳ ಕುರಿತ  ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಗ್ರಾಮಮಟ್ಟದಲ್ಲಿ ರಚನೆಯಾಗಿರುವ ಕಾವಲು ಸಮಿತಿಗಳು ಬಲವರ್ಧನೆಯಾದಲ್ಲಿ ಶೇ.90ರಷ್ಟು ಬಾಲ್ಯ ವಿವಾಹ, ಪೋಕ್ಸೋ ಪ್ರಕರಣ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯ ಪಟ್ಟರು.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವುದು ಕೇವಲ ಪೋಲಿಸ್ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸ ಮಾತ್ರವಲ್ಲ. ಇದು ಎಲ್ಲರ ಜವಾಬ್ದಾರಿ ಎಂದರು. 

ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ನಾಯಿ ಕಡಿತ ದಿಂದ ಮಕ್ಕಳನ್ನು ರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಯೋಗವು ಸರ್ಕಾರದ ಗಮನ ಸೆಳೆಯಲಿದ್ದು  ರಾಜ್ಯದಲ್ಲಿ  ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಯ ಜತೆಗೆ ರಕ್ಷಣಾತ್ಮಕ ವಾತಾವರಣವನ್ನು ನಿರ್ಮಿಸಲು ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ,  ವೆಂಕಟೇಶ್, ಶೇಖರ್ ಗೌಡ ಜಿ ರಾಮಾತ್ನಾಳ್ , ಡಾ ಕೆ.ಟಿ ತಿಪ್ಪೇಸ್ವಾಮಿ, ಎಸ್ ಮಂಜು,  ಅಪರ್ಣ ಎಂ ಕೊಳ್ಳ, ಜಿ.ಪಂ.ಸಿಇಒ ಡಾ. ವೈ ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಡಾ ಎನ್ ಭಾಸ್ಕರ್ ಮತ್ತಿತರರು ಇದ್ದರು.