ನ್ಯೂಸ್

ಚೀನಾದಲ್ಲಿ 393 ಅಡಿ ಎತ್ತರದಲ್ಲಿರುವ ಈ ಅಂಗಡಿಯ ಬಗ್ಗೆ ತಿಳಿದ್ರೆ ಅಚ್ಚರಿ ಖಂಡಿತ: ಇದಕ್ಕಿದೆ ವಿಚಿತ್ರ ಹೆಸರು!

ಬೀಜಿಂಗ್​: ಇಡೀ ಜಗತ್ತು ಅಚ್ಚರಿಗಳಿಂದ ಕೂಡಿದ ಆಗರವಾಗಿದೆ. ಅದೃಷ್ಟವಶಾತ್ ಇಂದಿನ ಇಂಟರ್ನೆಟ್​​ ಯುಗದಿಂದಾಗಿ ಇಂತಹ ಅಚ್ಚರಿಗಳು ನಮ್ಮ ಕಣ್ಣ ಮುಂದೆ ಬರುತ್ತಿವೆ. ಇದೀಗ ಮತ್ತೊಂದು ಅಚ್ಚರಿಯ ತಾಣದ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತೇವೆ.

ವಿಶೇಷ ಕಾರಣದಿಂದಾಗಿ ಚೀನಾದಲ್ಲಿರುವ ಅಂಗಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಅಂಗಡಿ ನೆಲದಿಂದ 393 ಅಡಿ ಎತ್ತರದಲ್ಲಿ ಬೃಹತ್​ ಬಂಡೆಯ ಒಂದು ಬದಿಯಲ್ಲಿದೆ. ಇದಕ್ಕೆ ಸಂಬಂಧಿಸಿದ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

ಅಂದಹಾಗೆ ಈ ಅಂಗಡಿ ಇರುವುದು ಚೀನಾದ ಹುವಾನ್​ ಪ್ರಾಂತ್ಯದ ಶಿನಿಯುಜೈ ರಾಷ್ಟ್ರೀಯ ಭೂವೈಜ್ಞಾನಿಕ ಉದ್ಯಾನವನದಲ್ಲಿ. ದೂರದಿಂದ ನೋಡಿದರೆ, ಬಂಡೆಯ ಒಂದು ಭಾಗದಲ್ಲಿ ಚಿಕ್ಕದಾಗ ಮರದ ಪೆಟ್ಟಿಗೆಯನ್ನು ತಪ್ಪಿ ಇರಿಸಿರುವಂತೆ ಕಾಣುತ್ತದೆ. ಬೆಟ್ಟದ ಒಂದು ಬದಿಯಲ್ಲಿ ಜೋತಾಡುವಂತಿರುವ ಮರದ ಪೆಟ್ಟಿಗೆಗೆ ವಿಚಿತ್ರವಾದ ಹೆಸರನ್ನೂ ಸಹ ಇಡಲಾಗಿದೆ. ಅದೇನೆಂದರೆ, ವಿಶ್ವದ ಅತ್ಯಂತ ಅನಾನುಕೂಲ ಅನುಕೂಲಕರ (world's most inconvenient convenience store) ಅಂಗಡಿ ಎಂದು ಇಡಲಾಗಿದೆ. ಈ ಸ್ಟೋರ್​ಗಳನ್ನು ಯಾಕೆ ಇಡಲಾಗಿದೆ ಎಂಬುದನ್ನು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ಈ ಅಂಗಡಿಯಲ್ಲಿ ಆರೋಹಿಗಳಿಗೆ ಉಪಹಾರ ಹಾಗೂ ಪಾನೀಯಗಳನ್ನು ಮಾರಾಟ ಮಾಡಲಾಗುತ್ತದೆ. ಅಂದರೆ, ಸ್ನ್ಯಾಕ್ಸ್​, ತಂಪು ಪಾನೀಯ ಮತ್ತು ನೀರು ಮುಂತಾದ ಪದಾರ್ಥಗಳು ಮಾತ್ರ ಇಲ್ಲಿ ದೊರೆಯುತ್ತದೆ. ಇತ್ತೀಚೆಗೆ @gunsnrosesgirl3 ಹೆಸರಿನ ಎಕ್ಷ್​ (ಟ್ವಿಟರ್​) ಖಾತೆಯಲ್ಲಿ ಅಂಗಡಿಯ ಫೋಟೋವನ್ನು ಪೋಸ್ಟ್​ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸುವುದರ ಜತೆಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ತೋರಿದರು.

ಫೋಟೋ ನೋಡಿ ಕಾಮೆಂಟ್‌ಗಳ ಸುರಿಮಳೆಗೈದಿರುವ ನೆಟ್ಟಿಗರು ಇದರ ಹಿಂದಿನ ಕಾರಣವನ್ನು ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ಇದು ಅದ್ಭುತವಾಗಿದೆ ಎಂದು ಹುಬ್ಬೇರಿಸಿದ್ದಾರೆ. ಇನ್ನು ಲಕ್ಷಾಂತರ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. 5 ಸಾವಿರಕ್ಕೂ ಹೆಚ್ಚು ಮಂದಿ ಫೋಟೋ ಲೈಕ್​ ಮಾಡಿದ್ದಾರೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮಾಡಿ. (ಏಜೆನ್ಸೀಸ್​)