ನ್ಯೂಸ್

ಮಾಜಿ ಸಚಿವ ರೇವಣ್ಣ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಹಾಸನ: ಜೆಡಿಎಸ್​ ಮುಖಂಡ ಹಾಗೂ ಗುತ್ತಿಗೆದಾರ ಶಿವಕುಮಾರ್​ ಎಂಬುವವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಿವಕುಮಾರ್​ ಮಾಜಿ ಸಚಿವ ಎಚ್​.ಡಿ.ರೇವಣ್ಣ ಅವರ ಆಪ್ತ. ಅಲ್ಲದೆ ಪ್ರಥಮ ದರ್ಜೆ ಗುತ್ತಿಗೆದಾರ. ಹಾಸನ ಸಂಗಮೇಶ್ವರ ಬಡಾವಣೆಯಲ್ಲಿರುವ ಮನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆದಾಯ ತೆರಿಗೆ ಇಲಾಖೆಯ 8 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ದಾಳಿ ನಡೆದಿದೆ. ತಡರಾತ್ರಿವರೆಗೂ ಅಧಿಕಾರಿಗಳು ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಶಿವಕುಮಾರ್ ಅವರನ್ನು ಹಾಸನದಲ್ಲಿರುವ ಐಟಿ ಕಚೇರಿಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ.

ಲೋಕಸಭಾ ಚುನಾವಣಾ ವೇಳೆಯಲ್ಲಿ ರೇವಣ್ಣ ಅವರ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗ 2ನೇ ಸುತ್ತಿನಲ್ಲಿ ಮತ್ತೆ ದಾಳಿ ಆರಂಭಿಸಿದ್ದಾರೆ.