ಬೆಂಗಳೂರು: ಟೆಂಡರ್ ಆಹ್ವಾನ, ಮೌಲ್ಯಮಾಪನ ಸಂದರ್ಭದಲ್ಲಿ ಉಂಟಾಗುವ ಗೊಂದಲ ತಪ್ಪಿಸಲೆಂದು ಜಿಎಸ್‌ಟಿ ಮೊತ್ತ ಹೊರತುಪಡಿಸಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಆರ್ಥಿಕ ಇಲಾಖೆ ಸಮ್ಮತಿಸಿದೆ.
ಟೆಂಡರ್ ಕರೆಯುವ ಸಂದರ್ಭದಲ್ಲಿ ಜಿಎಸ್‌ಟಿ ಮೊತ್ತವನ್ನು ಸ್ವಯಂಚಾಲಿತ ತಂತ್ರಾಂಶದಲ್ಲಿಯೇ ಲೆಕ್ಕಹಾಕಿ ಹೊಂದಿಸುವ ಬಗ್ಗೆ ನಿರ್ದಿಷ್ಟ ಸೂಚನೆಯನ್ನು ಇಲಾಖೆ ಕೈಬಿಟ್ಟಿದೆ.
ಅನುಮೋದಿತ ಏಕರೂಪ ಅನುಸೂಚಿ ದರಗಳ ಅನ್ವಯ ತಯಾರಿಸಿದ ಅಂದಾಜು ಪಟ್ಟಿಯಲ್ಲಿ ಜಿಎಸ್‌ಟಿ ಪ್ರತ್ಯೇಕಿಸಬೇಕು. ಟೆಂಡರ್ ಕರೆದು ನಂತರ ಗುತ್ತಿಗೆದಾರರೊಂದಿಗೆ ಒಪ್ಪಂದದ ವೇಳೆ ಜಿಎಇಸ್‌ಟಿ ಮೊತ್ತವನ್ನು ಸೇರಿಸಬೇಕು ಎಂದು ತಿಳಿಸಿದೆ.
ಒಪ್ಪಂದದ ಚಾಲ್ತಿ ಅವಧಿಯಲ್ಲಿ ಜಿಎಸ್‌ಟಿ ದರಗಳು ಪರಿಷ್ಕರಣೆಯಾದರೆ ಅದರನ್ವಯ ಪಾವತಿ/ ಹಿಂಪಾವತಿ ಮಾಡಲು ಸರ್ಕಾರ ಮತ್ತು ಗುತ್ತಿಗೆದಾರರು ಬದ್ಧರಾಗಿರುತ್ತಾರೆ ಎಂಬ ಅಂಶವನ್ನು ಸೇರಿಸಲು ತಿಳಿಸಲಾಗಿದೆ.
ಎಲ್ಲ ಇಲಾಖೆಗಳು, ನಿಗಮ-ಮಂಡಳಿ, ಸಂಸ್ಥೆಗಳನ್ನು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.