ನ್ಯೂಸ್

ಸತತ ಮಳೆ: ಉತ್ತರ ಪಿನಾಕಿನಿಗೆ ಜೀವಕಳೆ, ಹರಿದು ಬಂದ ನೀರು

ಚಿಕ್ಕಬಳ್ಳಾಪುರ: ಸತತವಾಗಿ ಹಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಉತ್ತರ ಪಿನಾಕಿ ನದಿಗೆ ಜೀವಕಳೆ ಬಂದಿದ್ದು, ಕಿಂಡಿ ಅಣೆಕಟ್ಟಿನವರೆಗೂ ನೀರು ಹರಿದು ಬಂದಿದೆ.
ನಂದಿ ಗಿರಿಧಾಮನದ ತಪ್ಪಲಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಉತ್ತರ ಪಿನಾಕಿನಿ ನದಿಗೆ 2 ವರ್ಷಗಳ ಬಳಿಕ ಜೀವ ಕಳೆ ಬಂದಿದೆ. ಉತ್ತಮ ಮಳೆ ಮುಂದುವರಿದಲ್ಲಿ ಆಂಧ್ರದ ಕಡೆಗೆ ನೀರು ಹರಿದು ಸಾಗಲಿದ್ದು ಜನ ತಂಡೋಪ ತಂಡವಾಗಿ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.
*ಹದಗೆಟ್ಟ ಪೋಷಕ ಕಾಲುವೆಗಳು*
ನದಿ ನೀರು ಕಿಂಡಿ ಅಣೆಕಟ್ಟಿನಿಂದ ಪೋಷಕ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸುವ ಉದ್ದೇಶದಿಂದ ಗೇಟುಗಳನ್ನು ಅಳವಡಿಸಲಾಗಿದೆ. 4 ಗೇಟುಗಳ ಪೈಕಿ ಈಗ ಮೂರು ಗೇಟ್ ಗಳ ಮೂಲಕ ಪೋಷಕ ಕಾಲಗಳಿಗೆ ನೀರು ಹರಿಯುತ್ತಿದೆ. ಆದರೆ ಪೋಷಕ ಕಾಲುವೆಗಳು ನಿರ್ವಹಣೆಯಿಲ್ಲದೆ ಹದಗೆಟ್ಟಿವೆ. ಇದರಿಂದ ನೀರು ಕೆರೆಗಳಿಗೆ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.
ಈ ಹಿಂದೆ ಪೋಷಕ ಕಾಲುವೆ ಮತ್ತು ಕೆರೆಗಳ ನಿರ್ವಹಣೆಯನ್ನು ಸಣ್ಣ ನೀರಾವರಿ ಇಲಾಖೆ ನೋಡಿಕೊಳ್ಳುತ್ತಿತ್ತು. ಆದರೆ, ಈಗ ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಒಳಪಟ್ಟಿದೆ. ನಂತರ ನಮ್ಮ ಗ್ರಾಮಗಳ ಕೆರೆ ಹಾಗೂ ಪೋಷಕ ಕಾಲುವೆಗಳ ಸ್ಥಿತಿ ಹಾಳಾಗುತ್ತಿದೆ. ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂದು ಮರಳೂರು ಕೆರೆ, ಇಡುಗೂರು ಕೆರೆ ಹಾಗೂ ಚಂದನದೂರು ಕೆರೆಯ ವ್ಯಾಪ್ತಿಯ ರೈತರು ಮಂಗಳವಾರ ಕಿಂಡಿ ಅಣೆಕಟ್ಟಿನ ಬಳಿ ಪ್ರತಿಭಟನೆ ನಡೆಸಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.