ಕಡಬ: ಸವಣೂರು ಗ್ರಾಮಪಂಚಾಯಿತಿಯನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ಸ್ಥಳೀಯರು ಸಹಕರಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್.ಮನವಿ ಮಾಡಿದರು.
ಸವಣೂರು ಗ್ರಾಪಂ, ಶ್ರೀ ರಾಮ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ, ಸ್ತ್ರೀ ಶಕ್ತಿ ಸಂಘ ಸವಣೂರು ಸಹಯೋಗದಲ್ಲಿ ಶುಕ್ರವಾರ ಬಟ್ಟೆ ಚೀಲ ತಯಾರಿಕಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು. ಸವಣೂರು ಗ್ರಾ.ಪಂನ್ನು ಪ್ಲಾಸ್ಟಿಕ್‌ಮುಕ್ತ ಮಾಡುವಲ್ಲಿ ಈ ಘಟಕ ಮಾದರಿಯಾಗಬೇಕು ಎಂದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್ ಬಟ್ಟೆ ಚೀಲ ಅನಾವರಣಗೊಳಿಸಿ ಘಟಕದ ಯಶಸ್ಸಿಗೆ ಶುಭಹಾರೈಸಿದರು.
ಸವಣೂರು ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಭವಾನಿ, ಶ್ರೀ ರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ, ನಿಕಟಪೂರ್ವ ಅಧ್ಯಕ್ಷೆ ರೇವತಿ, ಗ್ರಾ.ಪಂ ಲೆಕ್ಕಸಹಾಯಕ ಎ.ಮನ್ಮಥ ಉಪಸ್ಥಿತರಿದ್ದರು.
ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಗೀತಾ ಜಿ.ಎಸ್. ಪ್ರಸ್ತಾವನೆಗೈದರು. ಕೃಷಿ ಸಖಿ ಜಯಂತಿ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಮಹೇಶ್ ವಂದಿಸಿದರು. ಪಶು ಸಖಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.